×
Ad

ದಲಿತ ಸಾಧಕರ ಕುರಿತು ಜಾತಿ ಮೀರಿ ಯೋಚಿಸಲು ಸಾಧ್ಯವಾಗಿಲ್ಲ: ಲೋಲಾಕ್ಷ

Update: 2017-09-24 20:03 IST

ಬೆಂಗಳೂರು, ಸೆ.24: ದಲಿತ ಸಮುದಾಯದ ಹಲವಾರು ವ್ಯಕ್ತಿಗಳು ಹತ್ತು ಹಲವು ಕ್ಷೇತ್ರಗಳಲ್ಲಿ ಮಹತ್ತರವಾದುದನ್ನು ಸಾಧಿಸಿದ್ದಾರೆ. ಆದರೆ, ನಮ್ಮ ಭಾರತೀಯ ಮನಸಿಗೆ ದಲಿತ ಸಾಧಕರನ್ನು ಜಾತಿಯಿಂದ ಹೊರಗಿಟ್ಟು ಪ್ರಶಂಸಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಚಿಂತಕ ಲೋಲಕ್ಷ ವಿಷಾದಿಸಿದ್ದಾರೆ.

ರವಿವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ನಗರದಲ್ಲಿ ಆಯೋಜಿಸಿದ್ದ ಪೂನಾ ಒಪ್ಪಂದ-85 ಸಮಾಲೋಚನಾ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚೆಗೆ ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸಲಾಗಿತ್ತು. ಸಮಾವೇಶಕ್ಕೆ ಪ್ರತ್ಯೇಕವಾಗಿ ಹಣ ಒದಗಿಸದ ಸರಕಾರಕ್ಕೆ ನಾಚಿಕೆಯಾಗಬೇಕು. ಇಂದಿಗೂ ಭಾರತೀಯ ಮನಸು ಜಾತಿಯ ಸಂಕುಚಿತತೆಯಿಂದ ಹೊರ ಬಂದಿಲ್ಲ ಎಂಬುದಕ್ಕೆ ಈ ಸಮಾವೇಶ ಉತ್ತಮವಾದ ನಿದರ್ಶನವೆಂದು ಅವರು ತಿಳಿಸಿದರು.

ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಚರ್ಚೆಯಾಗಬೇಕು. ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ವಿದ್ಯಾರ್ಥಿಗಳೊಡನೆ ದೌರ್ಜನ್ಯ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವಾಂಶ ಸಂಗ್ರಹಿಸಿ ಮುಕ್ತ ಚರ್ಚೆ ನಡೆಸಿ, ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವಂತಾಗಬೇಕು ಎಂದು ಅವರು ಆಶಿಸಿದರು.


ಕೆಲವು ಪಟ್ಟಭದ್ರರು ಪೂನಾ ಒಪ್ಪಂದದ ನೈಜ ಉದ್ದೇಶವನ್ನು ಮರೆಮಾಚುತ್ತಿದ್ದಾರೆ. ಹೀಗಾಗಿ, ಆ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಡಿ. 9 ಹಾಗೂ 10 ರಂದು ನಗರದಲ್ಲಿ ಪೂನಾ ಒಪ್ಪಂದ ಬೆಂಗಳೂರು ಘೋಷಣೆ ರಾಷ್ಟ್ರ ಮಟ್ಟದ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ.
-ಎಂ.ವೆಂಕಟಸ್ವಾಮಿ, ಅಧ್ಯಕ್ಷ ಸಮತಾ ಸೈನಿಕ ದಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News