ಕೊಲೆ ಬೆದರಿಕೆ: ದೂರು ದಾಖಲು
ಬೆಂಗಳೂರು, ಸೆ.24: ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಪ್ರಭಾಕರ್ ರೆಡ್ಡಿ ಎಂಬವರು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಜನಾಧಿಕಾರ ಸಂಘರ್ಷ ಪರಿಷತ್‌ನ ಅಧ್ಯಕ್ಷ ಆದರ್ಶ್ ಅಯ್ಯರ್ ಎಂಬವರು ದೂರು ನೀಡಿದ್ದಾರೆ. ಪ್ರಭಾಕರ್ ರೆಡ್ಡಿ ವಿರುದ್ಧ ಭೂ ಕಬಳಿಕೆ ಆರೋಪ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗಾಗಿ ಪ್ರಭಾಕರ್ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಶನಿವಾರ ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ಬಂದಿದ್ದರು. ಇದೇ ವೇಳೆ ಭೂ ಕಬಳಿಕೆ ಪ್ರಕರಣ ದಾಖಲಿಸಿದ್ದ ಆದರ್ಶ್ ಹಾಗೂ ಸ್ನೇಹಿತ ಪ್ರಕಾಶ್ ಬಾಬು ಮೇಲೆ ರೆಡ್ಡಿ ಹಾಗೂ ಆತನ 20 ಬೆಂಬಲಿಗರು ಕೋರ್ಟ್‌ನ ನೆಲಮಹಡಿಯಲ್ಲಿರುವ ಕ್ಯಾಂಟೀನ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸರು ಎನ್‌ಎಸಿಆರ್ ದಾಖಲಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ ಹಾಗೂ ಬೇಗೂರಿನ ಹೋಬಳಿಯ ದೊಡ್ಡ ತೂಗುರು ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಸೈಟ್‌ಗಳಾಗಿ ಪರಿವರ್ತಿಸಿ ಸಾರ್ವಜನಿಕರ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆದರ್ಶ್ ಅವರು, ಮಡಿವಾಳ ಪೊಲೀಸ್ ಠಾಣೆ ಹಾಗೂ ಸೆಷನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಭೂ ಕಬಳಿಕೆ ಆರೋಪ ಹಿನ್ನೆಲೆಯಲ್ಲಿ ಪ್ರಭಾಕರ ರೆಡ್ಡಿ ವಿರುದ್ಧ 22 ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ.