ಶೋಷಿತ ವರ್ಗಗಳ ಅಭಿವೃದ್ಧಿಗೆ ಸಹಕಾರಿಯಾಗಬೇಕು: ಡಾ.ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು, ಸೆ. 24: ಕುರುಬ ಸಮುದಾಯ ಆಡಳಿತ ವ್ಯವಸ್ಥೆಯಲ್ಲಿ ಸಕ್ರಿಯವಾಗುವುದರ ಜೊತೆಗೆ ಸಮಾಜದ ಶೋಷಿತ ವರ್ಗವನ್ನು ಮೇಲೆತ್ತಲೂ ಕಾರ್ಯಪ್ರವೃತ್ತವಾಗಬೇಕು ಎಂದು ಮೈಸೂರು ವರುಣ ಕ್ಷೇತ್ರದ ವಸತಿ ಯೋಜನೆಗಳ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶತ ಶತಮಾನದಿಂದಲೂ ಎಲ್ಲ ಹಿಂದುಳಿದ ಸಮುದಾಯ ಶಿಕ್ಷಣ, ಉದ್ಯೋಗ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ, ಮುಂದಿನ ದಿನದಲ್ಲಿ ಎಲ್ಲ ವರ್ಗಗಳಿಗೆ ಶಿಕ್ಷಣ ಸಿಗುವಂತಾಗಬೇಕು. ಕುರುಬ ಸಮಾಜದಿಂದ ಹೆಚ್ಚು ಜನ ವೈದ್ಯ, ಇಂಜಿನಿಯರ್, ವಿಜ್ಞಾನ ಹಾಗೂ ಇನ್ನಿತರ ಉನ್ನತ ಹುದ್ದೆಗಳಲ್ಲಿ ಕಾಣಬೇಕು ಎಂದು ಹೇಳಿದರು.
ಕುರುಬ ಸಮುದಾಯದ ಯುವ ಪೀಳಿಗೆ ರಾಜ್ಯದ ಆಡಳಿತ, ನಿರ್ಧಾರ ತೆಗೆದುಕೊಳ್ಳುವ ಸ್ಥಾನಕ್ಕೆ ತಲುಪಬೇಕು. ಈ ನಿಟ್ಟಿನಲ್ಲಿ ಯುವ ಮನಸ್ಸುಗಳು ಉನ್ನತ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧೆಗಳಲ್ಲಿ ಹೆಚ್ಚಿ ಹೆಚ್ಚು ಭಾಗವಹಿಸಬೇಕು ಎಂದ ಅವರು, ಇಂದಿನ ದಿನದಲ್ಲಿ ಅನೇಕ ಯುವ ಪ್ರತಿಭೆಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಆಸಕ್ತರನ್ನು ಗುರುತಿಸಿ, ಅವರಿಗೆ ಅವಕಾಶ ಕೊಡುವ ಕೆಲಸ ಪ್ರತಿ ಪಕ್ಷದಿಂದ ಆಗಬೇಕು ಎಂದರು.
ಧಾರವಾಡದ ಮನ್ಸೂರು ರೇವಣ್ಣಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು ಮಾತನಾಡಿ, ಎಲ್ಲ ವರ್ಗದ ಜನರಿಗೆ ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ಕುರುಬ ಸಮುದಾಯ ಮತ್ತಷ್ಟು ಏಳಿಗೆ ಸಾಧಿಸುವಂತಾಗಬೇಕು. ಕುರುಬ ಸಮುದಾಯಕ್ಕೆ ಇರುವ ಮೀಸಲಾತಿ ಮತ್ತಷ್ಟು ಹೆಚ್ಚಿಸುವ ಅವಶ್ಯಕತೆ ಇದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಅವಧಿಯಲ್ಲಿ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಾಂತಕುಮಾರಿ, ಬೆಂವಿವಿ ಕುಲಸಚಿವ ಡಾ. ಬಿಕೆ. ರವಿ, ಚಿತ್ರನಟ ಪ್ರಥಮ್, ಒಕ್ಕೂಟದ ರಾಜ್ಯಾಧ್ಯಕ್ಷ ಆರ್. ಕೋಂದಂಡರಾಮ ಉಪಸ್ಥಿತರಿದ್ದರು.