ಈಡಿಗ ಸಮುದಾಯ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಿ: ಎಂ.ತಿಮ್ಮೇಗೌಡ

Update: 2017-09-24 14:56 GMT

ಬೆಂಗಳೂರು, ಸೆ.24: ಈಡಿಗರ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಾಕಷ್ಟು ಹಿಂದುಳಿದಿದ್ದು, ಸರಕಾರ ನಮ್ಮ ಸಮುದಾಯವನ್ನು ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರ್ನಾಟಕ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ತಿಳಿಸಿದ್ದಾರೆ.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಹಾಗೂ ಕೆಂಗೇರಿ ಹೋಬಳಿ ಆರ್ಯ ಈಡಿಗರ ಸಂಘದ ವತಿಯಿಂದ ನಗರದ ಮರಿಯಪ್ಪನ ಪಾಳ್ಯದಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಡಿಗರ ಸಮುದಾಯ ಅನಾಧಿ ಕಾಲದಿಂದಲ್ಲೂ ಸಮಾಜದ ಅವಕೃಪೆಗೆ ಒಳಗಾಗುತ್ತಾ ಬಂದಿದೆ. ಆದರೂ ನಮ್ಮ ಸಮುದಾಯದಲ್ಲಿ ಹುಟ್ಟಿದ ಮಾನವತಾವಾದಿ ನಾರಾಯಣ ಗುರುಗಳು ಎಲ್ಲ ಜಾತಿ ಸಮುದಾಯಗಳ ಅಭಿವೃದ್ಧಿಗಾಗಿ, ಆ ಮೂಲಕ ದೇಶದಲ್ಲಿ ಜಾತಿ ಪದ್ಧತಿ ಹಾಗೂ ಕಂದಾಚಾರಗಳನ್ನು ನಿರ್ಮೂಲನೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟರು. ಆದರೆ, ನಾರಾಯಣ ಗುರುಗಳಿಗೆ ಜನ್ಮಕೊಟ್ಟ ಈಡಿಗರ ಸಮಾಜವು ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ಅವಕೃಪೆಗೆ ಒಳಗಾಗಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಅವರು ವಿಷಾದಿಸಿದರು.

ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಈಡಿಗರ ಸಮಾಜದಲ್ಲಿ ಹುಟ್ಟಿದ ನಾರಾಯಣ ಗುರುಗಳು ಜೀವನ ಮಾರ್ಗ ಎಲ್ಲ ಜಾತಿ ಸಮುದಾಯಕ್ಕೂ ಮಾದರಿಯಾದುದ್ದಾಗಿದೆ. ಅವರ ತತ್ವಾದರ್ಶಗಳಲ್ಲಿ ನಾವೆಲ್ಲರೂ ಸಾಗೋಣವೆಂದು ತಿಳಿಸಿದರು.

ಈಡಿಗರ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಮುಖ್ಯವಾಗಿ ರಾಜಕೀಯ, ಸಾಮಾಜಿಕವಾಗಿ ಕಡೆಗಣನೆಗೆ ಒಳಗಾಗಿದೆ. ಹೀಗಾಗಿ ಸಮುದಾಯಕ್ಕೆ ಪ್ರಾಥಮಿಕ ಹಂತದಿಂದ ಉನ್ನತ ಹಂತದವರೆಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ನನ್ನಿಂದಾದ ಸಹಾಯವನ್ನು ಮಾಡುತ್ತೇನೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News