ಮಾತು-ಕೃತಿಯಲ್ಲಿ ಸತ್ಯವಿದ್ದರೆ ಶಾಶ್ವತವಾಗಿ ಉಳಿಯುತ್ತದೆ: ಲಕ್ಷ್ಮೀಶ ತೋಳ್ಪಾಡಿ

Update: 2017-09-24 14:59 GMT

ಬೆಂಗಳೂರು, ಸೆ. 24: ಪಿಸುಮಾತುಗಳಲ್ಲಿ ಸತ್ಯವಿರುತ್ತದೆ. ಅಂತಹ ಪಿಸುಮಾತುಗಳಿಂದ ಪುಸ್ತಕ ಬರೆಯಲು ಸಾಧ್ಯವಿಲ್ಲ. ಆದರೆ, ಮಾತು ಮತ್ತು ಕೃತಿಗಳಲ್ಲಿ ಸತ್ಯವಿದ್ದರೆ ಮಾತ್ರ ಶಾಶ್ವತವಾಗಿ ಉಳಿಯಲಿದೆ. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡಿದರೆ, ನಿರ್ಮಾಣ ಮಾಡಿದ್ದೆಲ್ಲವೂ ಕಳಚಿ ಬೀಳುತ್ತದೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ಜೋಗಿ ಅವರ ‘ಉಳಿದ ವಿವರಗಳು ಲಭ್ಯವಿಲ್ಲ’, ಗುರು ಪ್ರಸಾದ ಕಾಗಿನೆಲೆ ಅವರ ‘ಹಿಜಾಜ್’ ಹಾಗೂ ಗೋಲಾಲಕೃಷ್ಣ ಕುಂಟಿನಿ ಅವರ ‘ಅಪ್ಪನ ನೀಲಿ ಕಣ್ಣು’ ಕಥಾ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ಒಂದು ವಿಷಯವನ್ನು ಮಾತನಾಡಬೇಕಾದರೆ ನಮ್ಮ ಅಂತರಂಗ ಒಪ್ಪಿಕೊಳ್ಳುವಂತಿರಬೇಕು. ಆಗ ಮಾತ್ರ ಸತ್ಯದ ಪರವಾದ, ನ್ಯಾಯದ ಕಡೆಗೆ ಸಾಗಲು ಸಾಧ್ಯವಾಗುತ್ತದೆ. ಅದೇ ರೀತಿ, ಲೇಖಕರ ಬರಹದಲ್ಲಿ ಸತ್ಯವನ್ನು ಒಳಗೊಂಡಿರಬೇಕು. ಅನಗತ್ಯ ಕಲ್ಪನೆಗಳಿಗೆ ಸೀಮಿತ ಮಾಡಿರಬಾರದು ಎಂದು ಹೇಳಿದರು.

ಜೀವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಜೀವ ಶೂನ್ಯದಲ್ಲಿ ತೊಡಗಿಸಿಕೊಳ್ಳುವುದು ಸಹ ತಿಳಿದಿರಬೇಕು. ಪ್ರತಿ ಆರಂಭದ ಹಿಂದೆ ಅಂತ್ಯವಿರುತ್ತದೆ. ಪ್ರತಿ ಕೆಲಸ ಹಾಗೂ ಪ್ರಯೋಗ ಮಾಡುವಾಗ ಹಿಂತೆಗೆದುಕೊಳ್ಳುವ ಗುಣಗಳನ್ನು ತಿಳಿದಿರಬೇಕು. ಜೀವನದಲ್ಲಿ ಭಾವಿಸುವುದಕ್ಕಿಂತ ಕತೆ, ಕಾದಂಬರಿಗಳು ಬೇರೊಂದು ಚೆಲವನ್ನು ನೀಡುತ್ತವೆ. ಸಂಬಂಧಗಳ ಜಡ ಸಂಗತಿಗಳನ್ನು ಮುರಿಯುವ ಜತೆಗೆ ಹೊಸ ಸಂಗತಿಗಳನ್ನು ರೂಪಿಸುವ ವಿಶೇಷತೆಯನ್ನು ಕತೆಗಳು ಹೊಂದಿರುತ್ತವೆ ಎಂದು ತಿಳಿಸಿದರು.

ಜೋಗಿ ಬರಹದಲ್ಲಿ ಹೊಸ ಹೊಸ ತಿರುವುಗಳನ್ನು ಪಡೆಯುವ ಪ್ರಯೋಗ ಮತ್ತು ಪರೋಕ್ಷವಾಗಿ ಏನು ಹೇಳಬೇಕು ಅದನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುತ್ತಾರೆ. ಕುಂಟಿನಿ ಕತೆಗಳಲ್ಲಿ ಜವಾಬ್ದಾರಿ ಬೇರೊಬ್ಬರು ಹೇಳುವುದಲ್ಲ ನಮಗೆ ನಾವೇ ಅರಿತುಕೊಳ್ಳುವುದು ಎಂಬುದನ್ನು ತಿಳಿಸುತ್ತವೆ. ಈ ರೀತಿಯ ಹೊಸ ಪ್ರಯೋಗಗಳಿಂದಲೇ ಉಪ ಸಂಹಾರ ಕಲಿಯುವುದಾಗಿದೆ ಎಂದು ಶ್ಲಾಘಿಸಿದರು.

ಚಿತ್ರ ನಟ ಉಪೇಂದ್ರ ಮಾತನಾಡಿ, ಪುಸ್ತಕಗಳಿಂದ ಸೃಜನ ಶೀಲತೆ, ಪ್ರತಿಭೆ ಬೆಳೆಯಲು ಸಹಕಾರಿಯಾಗುತ್ತದೆ. ಹಿಂದೆ ಚಂದಮಾವ ಕಥೆಗಳನ್ನು ಓದಿಕೊಂಡು ಗ್ರಾಮೀಣ ಪ್ರದೇಶದ ಸಂಸ್ಕೃತಿ, ಹಳ್ಳಿಗಳ ಕಲ್ಪನೆ, ಪ್ರೀತಿ, ಸ್ನೇಹವನ್ನು ಅನುಭವಿಸುತ್ತಿದ್ದೆವು. ಅಲ್ಲದೆ, ನಮ್ಮೆಳಗೆ ಬೃಹತ್ತಾದ ಕಲ್ಪನೆಯನ್ನು ಪುಸ್ತಕಗಳು ಬೆಳೆಸುತ್ತವೆ. ಹೀಗಾಗಿ, ಪುಸ್ತಕಗಳು ಎಂದಿಗೂ ಶಾಶ್ವತವಾದುದಾಗಿದೆ ಎಂದು ಹೇಳಿದರು.

ಸಾಹಿತಿ ಕೆ. ಸತ್ಯನಾರಾಯಣ ಮಾತನಾಡಿ, ಕಾಗಿನೆಲೆ ಕತೆಯಲ್ಲಿ ವಲಸೆಯ ಅಸ್ಮಿತೆ, ತಂತ್ರಜ್ಞಾನ ಮತ್ತು ರಾಜಕೀಯ ಮೂರು ಕೂಡ ಒಂದರಲ್ಲಿ ಮತ್ತೊಂದು ಸೂಕ್ಷ್ಮವಾಗಿ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿಸುವ ಹಾಗೂ ಅನುಭವ ಶೋಧನಾ ಜವಾಬ್ದಾರಿ ಹೊಂದಿರುವ ಗಂಭೀರ ಕಾದಂಬರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ, ಬಿ.ಎಸ್. ಲಿಂಗದೇವರು, ಲೇಖಕರಾದ ಜೋಗಿ, ಗೋಪಾಲ ಕೃಷ್ಣ ಕುಂಟಿನಿ ಹಾಗೂ ಗುರು ಪ್ರಸಾದ ಕಾಗಿನೆಲೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News