ಕಾಂಗ್ರೆಸ್‌ಗೆ ಬಿಬಿಎಂಪಿ ಮೇಯರ್ ಸ್ಥಾನ: 'ಸಮನ್ವಯ ಸಮಿತಿ’ ರಚನೆಗೆ ಜೆಡಿಎಸ್ ಷರತ್ತು

Update: 2017-09-24 15:24 GMT

ಬೆಂಗಳೂರು, ಸೆ. 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು, ‘ಸಮನ್ವಯ ಸಮಿತಿ’ ರಚನೆಗೆ ಕಾಂಗ್ರೆಸ್ ಒಪ್ಪಬೇಕು, ಆ ಸಮಿತಿಯಲ್ಲೇ ಪಾಲಿಕೆ ಪ್ರಮುಖ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್‌ಗೆ, ಜೆಡಿಎಸ್ ಷರತ್ತು ವಿಧಿಸಿದೆ.

ರವಿವಾರ ಪದ್ಮನಾಭನಗರದಲ್ಲಿನ ದೇವೇಗೌಡ ಅವರ ನಿವಾಸದಲ್ಲಿ ಬಿಬಿಎಂಪಿ ಮೇಯರ್-ಉಪ ಮೇಯರ್ ಆಯ್ಕೆ ಸಂಬಂಧ ಜೆಡಿಎಸ್ ವರಿಷ್ಠ ದೇವೇಗೌಡರ ಅಧ್ಯಕ್ಷತೆಯಲ್ಲಿ ಪಾಲಿಕೆ ಜೆಡಿಎಸ್ ಸದಸ್ಯರು ಹಾಗೂ ಶಾಸಕರ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಯರ್ ಆಯ್ಕೆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು, ಅವರು ಆ ಸ್ಥಾನಕ್ಕೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಿಕೊಳ್ಳಲಿ. ಆದರೆ, ಉಪ ಮೇಯರ್ ಯಾರಾಗಬೇಕು ಎಂದು ಮತ್ತೊಂದು ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸದ್ಯ ಆಸ್ಪತ್ರೆಯಲ್ಲಿ ಇದ್ದಾರೆ ಅವರ ಸಲಹೆಯನ್ನೂ ತೆಗೆದುಕೊಳ್ಳುತ್ತೇವೆ. ಆ ಬಳಿಕ ಉಪ ಮೇಯರ್ ಸ್ಥಾನಕ್ಕೆ ಯಾರನ್ನೂ ನೇಮಿಸಬೇಕೆಂದು ಕುಮಾರಸ್ವಾಮಿ ಜತೆ ಮತ್ತೊಮ್ಮೆ ಮಾತನಾಡಿ ಮುಂದುವರೆಯುತ್ತೇವೆ ಎಂದು ಹೇಳಿದರು.

ಬಿಬಿಎಂಪಿಯ ನಾಲ್ಕು ಸ್ಥಾಯಿ ಸಮಿತಿಗಳ ಸ್ಥಾನಗಳ ಹಂಚಿಕೆ ಸಂಬಂಧ ಸಭೆಯಲ್ಲಿ ಪ್ರಾಥಮಿಕ ಚರ್ಚೆ ನಡೆಸಿದ್ದೇವೆ. ಈ ಹಿಂದೆ ಬಿಬಿಎಂಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ನಡೆದಿದ್ದ ಹಲವು ನೋವುಗಳನ್ನು ಪಕ್ಷದ ಸದಸ್ಯರು ಹಂಚಿಕೊಂಡಿದ್ದಾರೆ. ಆದುದರಿಂದ ಸಮನ್ವಯ ಸಮಿತಿ ರಚನೆ ಮಾಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ ಎಂದರು.

ಸೆ.28ಕ್ಕೆ ಬಿಬಿಎಂಪಿ ಮೇಯರ್ ಚುನಾವಣೆ ನಡೆಯಲಿದ್ದು, ಸೆ.27ಕ್ಕೆ ಮತ್ತೊಮ್ಮೆ ಸಭೆ ಸೇರಿ ಉಪ ಮೇಯರ್ ಸ್ಥಾನಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಪ್ರಕಟಿಸಲಿದ್ದೇವೆ. ಪಾಲಿಕೆ ಸುಗಮ ಆಡಳಿತದ ದೃಷ್ಟಿಯಿಂದ ಸಮನ್ವಯ ಸಮಿತಿ ರಚನೆಗೆ ಕಾಂಗ್ರೆಸ್ ಒಪ್ಪಬೇಕು ಎಂದು ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News