ಬೌಂಡರಿ ಲೈನ್‌ನಲ್ಲಿ ಆಕರ್ಷಕ ಕ್ಯಾಚ್ ಪಡೆದು ಎಲ್ಲರ ಮನಗೆದ್ದ ಮನೀಷ್ ಪಾಂಡೆ

Update: 2017-09-25 06:31 GMT

ಇಂದೋರ್, ಸೆ.25: ಆಸ್ಟ್ರೇಲಿಯ ವಿರುದ್ಧ ರವಿವಾರ ಇಂದೋರ್‌ನಲ್ಲಿ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಬೌಂಡರ್ ಲೈನ್‌ನಲ್ಲಿ ಅದ್ಭುತ ಹಾಗೂ ಆಕರ್ಷಕ ಕ್ಯಾಚ್ ಪಡೆದಿರುವ ಮನೀಷ್ ಪಾಂಡೆ ತಂಡಕ್ಕೆ ಮೇಲುಗೈ ತಂದರು. ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಮನವನ್ನೂ ಗೆದ್ದರು. ಪಾಂಡೆ ಬೌಂಡರಿಲೈನ್‌ನಲ್ಲಿ ಕಷ್ಟಕರವಾದ ಕ್ಯಾಚ್ ಪಡೆದ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

 ದೇಶೀಯ ಕ್ರಿಕೆಟ್‌ನಲ್ಲಿ ಓರ್ವ ಶ್ರೇಷ್ಠ ಫೀಲ್ಡರ್ ಆಗಿರುವ ಪಾಂಡೆ ಇಂದೋರ್‌ನಲ್ಲಿ ಮತ್ತೊಂದು ಅದ್ಭುತ ಕ್ಯಾಚ್ ಪಡೆದು ಗಮನ ಸೆಳೆದರು. ಒಂದು ಹಂತದಲ್ಲಿ 1 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ ಆನಂತರ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾರ್ಕಸ್ ಸ್ಟೋನಿಸ್ ಹಾಗೂ ಹ್ಯಾಂಡ್ಸ್‌ಕಾಂಬ್ ಕ್ರೀಸ್‌ನಲ್ಲಿದ್ದಾಗ ಆಸೀಸ್ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿತ್ತು. ಆದರೆ 48ನೆ ಓವರ್‌ನ ಕೊನೆಯ ಎಸೆತದಲ್ಲಿ ಪಾಂಡೆ ಪಡೆದ ಕ್ಯಾಚ್ ಆಸೀಸ್‌ಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿತು.

  ಹ್ಯಾಂಡ್ಸ್‌ಕಾಂಬ್ ಭಾರತದ ವೇಗಿ ಜಸ್‌ಪ್ರಿತ್ ಬುಮ್ರಾ ಎಸೆತವನ್ನು ಬೌಂಡರಿಯತ್ತ ಬಾರಿಸಿದರು. ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಪಾಂಡೆ ಮೇಲಕ್ಕೆ ಜಿಗಿದು ಚೆಂಡನ್ನು ಕ್ಯಾಚ್ ಪಡೆದರು. ಆದರೆ, ತಕ್ಷಣವೇ ಆಯತಪ್ಪಿದ ಪಾಂಡೆ ತಾನು ಬೌಂಡರಿ ಗೆರೆ ದಾಟುವುದನ್ನು ಅರಿತು ಚೆಂಡನ್ನು ಮೇಲಕ್ಕೆ ಹಾರಿಸಿ ಬೌಂಡರಿ ಲೈನ್ ಆಚೆ ಜಿಗಿದರು. ಮತ್ತೊಮ್ಮೆ ಮೈದಾನಕ್ಕೆ ವಾಪಸಾಗಿ ಕ್ಯಾಚ್ ಪಡೆದರು. ಪಾಂಡೆಯ ಈ ಕ್ಯಾಚ್ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News