ಗಝಲ್ ಮಾಂತ್ರಿಕನಿಗೆ ಸ್ಮಾರಕ ನಿರ್ಮಾಣವಾಗಲಿ

Update: 2017-09-25 18:40 GMT

ಮಾನ್ಯರೆ,

ಕನ್ನಡದ ಗಝಲ್ ಗಾಯಕರಲ್ಲಿ ಮೊದಲಿಗರಾದ ದಿವಂಗತ ರವೀಂದ್ರ ಹಂದಿಗನೂರರವರು ಗಾನ ಗಂಧರ್ವ ಪುಟ್ಟರಾಜ ಗವಾಯಿಗಳ ಪ್ರಿಯ ಶಿಷ್ಯರಲ್ಲಿ ಒಬ್ಬರು. ಇವರು ಸಮಾಜದಲ್ಲಿ ಶಾಂತಿ ಸೌಹಾರ್ದವನ್ನು ಹಾಳು ಮಾಡುತ್ತಿರುವ ಇಂದಿನ ರಾಜಕಾರಣಿಗಳ ಭ್ರಷ್ಟ ಅಧಿಕಾರಿಗಳ ಮತ್ತು ದುಶ್ಚಟದತ್ತ ಸಾಗುತ್ತಿರುವ ಯುವ ಸಮೂಹ ಸೇರಿದಂತೆ ಸಮಾಜದಲ್ಲಿನ ಅನ್ಯಾಯ, ಅಧರ್ಮ, ಅಸಮಾನತೆ, ಅಸ್ಪೃಶ್ಯತೆಯನ್ನು ತಮ್ಮ ಮಧುರ ಗಝಲ್ ಗಾಯನದ ಮೂಲಕ ಖಂಡಿಸಿ ಸಮಾಜದ ಸಾಮಾಜಿಕ ಪರಿವರ್ತನೆಗಾಗಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕೇವಲ ಹಿಂದಿ ಭಾಷೆಗೆ ಸೀಮಿತ ಇದ್ದ ಗಝಲ್ ಗಾಯನವನ್ನು ಕನ್ನಡಕ್ಕೆ ಪರಿಚಯಿಸಿ, ದೇಶ ವಿದೇಶಗಳಲ್ಲೂ ಕನ್ನಡ ಗಝಲ್ ಗಾಯನದ ಇಂಪು ಕೇಳುವಂತೆ ಮಾಡಿದ್ದಾರೆ. 2 ಬಾರಿ ಅಮೆರಿಕದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಬಸವಣ್ಣ, ಕಡಕೋಳ ಮಡಿವಾಳೇಶ್ವರರ ಸಾವಿರಾರು ತತ್ವ ಪದಗಳನ್ನು ತಮ್ಮ ವಿಶಿಷ್ಟವಾ ಕಂಠಸಿರಿಯಿಂದ ಹಾಡಿ ಜನರ ಮನ ಗೆದ್ದ ಶ್ರೇಷ್ಠ ಗಝಲ್ ಸಂಗೀತ ಸಾಧಕ ರವೀಂದ್ರ ಹಂದಿಗನೂ ರರವರು 2002 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರವೀಂದ್ರ ಹಂದಿಗನೂರರವರು ಬರೀ ಕನ್ನಡ ಅಷ್ಟೇ ಅಲ್ಲದೇ ಉರ್ದು, ಮರಾಠಿ, ಹಿಂದಿ ಶೈಲಿಯ ಹಲವು ಗೀತೆ ಗಳನ್ನು ಹಾಡಿದ್ದಾರೆ. ಇವರ ಗಾಯನಕ್ಕೆ ಶಹನಾಯಿ ಖ್ಯಾತಿಯ ಬಿಸ್ಮಿಲ್ಲಾ ಖಾನ್, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಅನೇಕ ಗಣ್ಯರು ಮನ ಸೋತಿದ್ದಾರೆ.

ಹೀಗೆ ಸತತ ಮೂರು ದಶಕಗಳ ಕಾಲ ಕನ್ನಡ ಗಝಲ್ ಗಾಯನದ ಮೂಲಕ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದುಕೊಟ್ಟ ನಮ್ಮ ಹೆಮ್ಮೆಯ ಕನ್ನಡದ ಗಾನ ಕೋಗಿಲೆ ರವೀಂದ್ರ ಹಂದಿಗನೂರರವರು ನಮ್ಮನ್ನಗಲಿ ನಾಲ್ಕು ವರ್ಷಗಳೇ ಕಳೆದರೂ ಅವರ ಸಮಾಧಿ ಮಾತ್ರ ಹುಟ್ಟೂರು ವಿಜಯಪುರ ಜಿಲ್ಲೆಯ ಹಂದಿಗನೂರ ಗ್ರಾಮದಲ್ಲಿ ಸರಕಾರದ ಯಾವುದೇ ಸೌಲಭ್ಯ ಸಿಗದೆ ಅನಾಥವಾಗಿ ಬಿದ್ದಿರುವುದು ಅತ್ಯಂತ ವಿಷಾದನೀಯ ಸಂಗತಿ.

ಆದ್ದರಿಂದ ಇನ್ನಾದರೂ ಈ ಭಾಗದ ಜನಪ್ರತಿನಿಧಿ ಗಳು ಎಚ್ಚೆತ್ತುಕೊಂಡು ಗಝಲ್ ಮಾಂತ್ರಿಕ ರವೀಂದ್ರ ಹಂದಿಗನೂರರವರ ಸಮಾಧಿಯನ್ನು ಸ್ಮಾರಕವಾಗಿ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

Writer - ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News