ಉ.ಪ್ರದೇಶದ ಶಿಕ್ಷಣ ಮಂತ್ರಿ ರಾಜೀನಾಮೆಗೆ ಜೆಡಿಯು ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಅರುಣ್ ಶ್ರೀವಾತ್ಸವ್ ಆಗ್ರಹ
ಬೆಂಗಳೂರು, ಸೆ.26: ಬನಾರಸ್ ಹಿಂದು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಲಾಠಿಚಾರ್ಜ್ ತೀವ್ರ ಖಂಡನೀಯ. ಈ ಘಟನೆ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರಕಾರದ ಕಳಕಳಿ ತೋರಿಸುತ್ತದೆ. ಘಟನೆಯ ಹೊಣೆ ಹೊತ್ತು ಉತ್ತರ ಪ್ರದೇಶದ ಶಿಕ್ಷಣ ಮಂತ್ರಿ ರಾಜೀನಾಮೆ ನೀಡಬೇಕು ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾತ್ಸವ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಮೂಲಕ ದೇಶದ ಜನತೆಗೆ ದ್ರೋಹ ಎಸಗಿದೆ ಎಂದು ಕಿಡಿಕಾರಿದರು.
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಲಾಗುತ್ತದೆ, ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿ ಮೂರು ವರ್ಷಗಳು ಕಳೆದರೂ ಇದುವರೆಗೂ ಯಾವುದನ್ನು ಜಾರಿ ಮಾಡಿಲ್ಲ. ಜೊತೆಗೆ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದು, ಇಂದು ಸಂಪೂರ್ಣ ಹುಸಿಯಾಗಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ 17 ಮಂದಿ ಬಿಜೆಪಿ ಸಂಸದರಿದ್ದರೂ ಮಹಾದಾಯಿ ನದಿ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ. ಮೇಕೆದಾಟು ಯೋಜನೆಗೆ ಕೇಂದ್ರ ಒಪ್ಪಿಗೆ ಕೊಡಿಸುವಲ್ಲಿಯೂ ಸೋತಿದ್ದಾರೆ. ನೋಟು ಅಮಾನ್ಯ, ಜಿಎಸ್‌ಟಿ ಮೂಲಕ ದೇಶದ ಜನತೆಯನ್ನು ಸಂಕಷ್ಟಕ್ಕೆ ನೂಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 55 ಡಾಲರ್ ತೈಲ ಬೆಲೆಯಿದ್ದರೂ, ಪದೇ ಪದೆ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಡಿಎ ಸರಕಾರದ ಹಿಂದುತ್ವ ನೀತಿ ಮತ್ತು ಪರಧರ್ಮಗಳ ಬಗೆಗಿನ ಅಸಹಿಷ್ಣುತೆ, ವಿಚಾರವಾದಿಗಳಾದ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಕಾರಣವಾಗಿದೆ. ಈ ಸರಕಾಸರದ ನೀತಿಗಳು ದೇಶದ ಐಕತ್ಯೆ ಹಾಗೂ ಸಂವಿಧಾನಕ್ಕೆ ಧಕ್ಕೆ ತರುವಂತಿವೆ. ಹಾಗಾಗಿ ಸರಕಾರ ಈ ಸಂಕುಚಿತ ನೀತಿಗಳನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಇದರ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ. ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ನಿತೀಶ್‌ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿರ್ಣಯ ಮಾಡುವುದಾಗಿ ಅರುಣ್ ಶ್ರೀವಾತ್ಸವ್ ಹೇಳಿದರು.