×
Ad

ಬಿಜೆಪಿ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-09-26 18:52 IST

ಬೆಂಗಳೂರು, ಸೆ.26: ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಬಿಜೆಪಿಯವರು ಮಾತನಾಡುತ್ತಾರೆ. ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಮಾಡಬಾರದ್ದನ್ನು ಮಾಡಿ ಜೈಲಿಗೂ ಹೋಗಿ ಬಂದ ಅವರು ದಿನಕ್ಕೊಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಐದು ವರ್ಷ ಬಿಜೆಪಿಯವರೇ ಆಡಳಿತ ನಡೆಸಿದರು. ಆದರೂ ಅವರೇಕೆ ಬೆಂಗಳೂರು ನಗರದ ಅಭಿವೃದ್ಧಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಾವು ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ರಾಜ ಕಾಲುವೆ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಬಿಜೆಪಿಯವರು ಆಡಳಿತ ನಡೆಸುವಾಗ ಎಂಟು ಸಾವಿರ ಕೋಟಿ ರೂ.ಗಳ ಪಾಲಿಕೆ ಆಸ್ತಿಯನ್ನು ಅಡಮಾನ ಇಟ್ಟಿದ್ದರು. ನಾವು ಈಗ ಅದನ್ನು ಒಂದೊಂದಾಗಿ ಬಿಡಿಸಿಕೊಳ್ಳುತ್ತಿದ್ದೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ಎಲ್ಲ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡುತ್ತೇವೆ. ಈಗಾಗಲೇ ಒಂದು ಸಾವಿರ ಕೋಟಿಯನ್ನು ಅದಕ್ಕಾಗಿ ಖರ್ಚು ಮಾಡಿದ್ದೇವೆ ಎಂದು ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರ ಬಿಬಿಎಂಪಿಗೆ 7,300 ಕೋಟಿ ರೂ.ಗಳ ಅನುದಾನ ಕೊಟ್ಟಿದೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಒತ್ತಡದ ಪರಿಣಾಮ ಆಡಳಿತ ಕಷ್ಟವಾಗಿದೆ. ಹೀಗಾಗಿ ಬಿಬಿಎಂಪಿ ವಿಭಜನೆ ಕುರಿತು ಚಿಂತನೆ ನಡೆದಿದೆ. ನಾಡ ಪ್ರಭು ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿದವರು ನಾವು. ಜೊತೆಗೆ ಅವರ ಹೆಸರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿದ್ದೇವೆ. ಇದನ್ನು ವೋಟಿಗಾಗಿ ಮಾಡಿಲ್ಲ. ಕೆಂಪೇಗೌಡರಿಗೆ ಗೌರವ ಸಲ್ಲಿಸಲು ಮಾಡಿದ್ದೇವೆ. ಇದರಲ್ಲಿ ರಾಜಕಾರಣ ಇಲ್ಲ ಎಂದರು.

ಬಿಬಿಎಂಪಿಗೆ ಹೊಸದಾಗಿ ಸೇರಿದ ಹಳ್ಳಿಗಳಿಗೆ ರಸ್ತೆ, ನೀರು, ಚರಂಡಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಇಂದಿರಾ ಕ್ಯಾಂಟೀನ್ ನಮ್ಮ ಕೊಡುಗೆ. ಹಿಂದಿನವರು ಏಕೆ ಈ ಕೆಲಸ ಮಾಡಲಿಲ್ಲ. ಆಗ ಬಡವರು ಇರಲಿಲ್ಲವೇ. ಅಕ್ಟೋಬರ್ 2ಕ್ಕೆ ಇನ್ನೂ 50, ನವೆಂಬರ್ 1ಕ್ಕೆ 47 ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿದೆ. ಆಸ್ಪತ್ರೆಗಳಲ್ಲಿ  ಕ್ಯಾಂಟೀನ್ ಆರಂಭಿಸಲಾಗುವುದು. ಪೌರ ಕಾರ್ಮಿಕರ ಸೇವೆ ಖಾಯಂ ಮತ್ತು ಅವರ ಸಂಬಳ ಹೆಚ್ಚಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಪ್ರತೀ ತಿಂಗಳು ತಲಾ 17 ಸಾವಿರ ರೂ. ವೇತನ ಪೌರ ಕಾರ್ಮಿಕರ ಅಕೌಂಟ್‌ಗೆ ನೇರವಾಗಿ ಹೋಗುತ್ತದೆ. ಕೊಳೆಗೇರಿ ನಿವಾಸಿಗಳ ನೀರಿನ ಬಾಕಿ ಬಿಲ್ ಮನ್ನಾ ಮಾಡಿದ್ದು, ಪ್ರತೀ ತಿಂಗಳು ಅವರಿಗೆ ಹತ್ತು ಸಾವಿರ ಲೀಟರ್ ನೀರು ಉಚಿತವಾಗಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ನಗರ ಡೈನಾಮಿಕ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಬ್ರಾಂಡ್ ಉಳಿಸಿಕೊಳ್ಳಲು ಎಲ್ಲ ಪ್ರಯತ್ನವನ್ನು ಸರಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಹಣವನ್ನು ನೀಡಿದ್ದಾರೆ. ಮುಂದೆಯೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ನೀಡಿ ಎಂದು ಹೇಳಿದರು.

ಶಾಸಕ ಗೋಪಾಲಯ್ಯ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡರೆ, ಬಿಜೆಪಿ ನಾಯಕರು ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ. ಆರ್.ಟಿ.ಐ. ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಲಿಲ್ಲ. ಈಗ ನಮಗೂ ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ ಎಂದು ಮಾಜಿ ಉಪಮೇಯರ್ ಹರೀಶ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ಪಾಲಿಕೆ ಸದಸ್ಯ ಶಿವರಾಜು ಮಾತನಾಡಿ, ವಾರ್ಡ್‌ನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಗ ಕೇಂದ್ರ ಉದ್ಘಾಟನೆ, ಪೌರ ಕಾರ್ಮಿಕರ ಶ್ರಮ ವಿಹಾರ ಕೇಂದ್ರ ಉದ್ಘಾಟಿಸಲಾಗಿದೆ. ಎಂ.ವಿ. ನಗರದಲ್ಲಿ 258 ಮನೆಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ವಾರ್ಡ್‌ನಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದೇ ವೇಳೆ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಆರ್. ಸೀತಾರಾಂ, ಶಾಸಕ ಮುನಿರತ್ನ, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ, ಮಹಾನಗರ ಪಾಲಿಕೆಯ ಹಲವು ಸದಸ್ಯರು ಉಪಸ್ಥಿತರಿದ್ದರು.


ಅಕ್ಟೋಬರ್ 2ಕ್ಕೆ 50, ನವೆಂಬರ್ 1ಕ್ಕೆ ಇನ್ನೂ 47 ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿವೆ. ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News