ಸಿಜೆಐಯಿಂದ ರಾಷ್ಟ್ರಪತಿಗೆ ರಾಜೀನಾಮೆ ಪತ್ರ ರವಾನೆ
ಬೆಂಗಳೂರು, ಸೆ.26: ರಾಜ್ಯ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಜಯಂತ್ ಪಟೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರಪತಿಯವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.
ಗುಜರಾತ್ ಹೈಕೋರ್ಟ್‌ನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಯಂತ್ ಪಟೇಲ್ ಅವರನ್ನು 2016ರ ಫೆಬ್ರವರಿ 13ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರ ಬಳಿಕ ಎರಡನೆ ಸ್ಥಾನದಲ್ಲಿದ್ದ ಜಯಂತ್ ಪಟೇಲ್ ಅವರು 2018ರ ಆ.3ರಂದು ನಿವೃತ್ತಿಯಾಗಬೇಕಿತ್ತು.
1979ರಲ್ಲಿ ಗುಜರಾತ್‌ನ ರಾಜ್‌ಕೋಟ್‌ನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ್ದ ಅವರು, 2001ರ ಡಿ.3ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯ ಮೂರ್ತಿಯಾಗಿ ನೇಮಕವಾಗಿದ್ದರು. 2004ರ ಆ.9ರಂದು ಪೂರ್ಣಾವಧಿ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದರು.
ಈ ಹಿಂದೆ ರಾಜ್ಯದಲ್ಲಿ ತಮಗಿಂತ ಕಿರಿಯ ನ್ಯಾಯಮೂರ್ತಿಯೊಬ್ಬರಿಗೆ ಸುಪ್ರೀಂಕೋರ್ಟ್‌ಗೆ ಭಡ್ತಿ ನೀಡಿದ್ದ ಕ್ರಮ ಪ್ರತಿಭಟಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಂ.ಎಲ್.ಪೆಡ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.