ಮತ್ತೆ ಬಿಜೆಪಿಯೊಳಗೆ ‘ಶಿಕಾರಿಪುರ’

Update: 2017-09-27 15:15 GMT

ಬಿ.ಎಸ್.ಯಡಿಯೂರಪ್ಪ ಬಿಜೆಪಿಯೊಳಗಿನ ಬ್ರಾಹ್ಮಣ್ಯ ರಾಜಕಾರಣಕ್ಕೆ ಮತ್ತೆ ಶಿಕಾರಿಯಾಗಲಿದ್ದಾರೆಯೇ? ಎನ್ನುವ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯ ಸ್ವರೂಪವನ್ನು ಪಡೆಯುತ್ತಿದೆ. ಯಡಿಯೂರಪ್ಪರನ್ನು ಅವರ ಶಿಕಾರಿಪುರದ ಗುಹೆಯಿಂದ ಹೊಗೆ ಹಾಕಿ ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಅವರನ್ನು ಉತ್ತರ ಕರ್ನಾಟಕದ ಯಾವುದಾದರೊಂದು ಭಾಗಕ್ಕೆ ಕಳುಹಿಸಲಾಗುತ್ತದೆ ಎನ್ನುವ ವದಂತಿ ದಿನೇ ದಿನೇ ರೆಕ್ಕೆ ಪುಕ್ಕಗಳನ್ನು ಪಡೆದುಕೊಳ್ಳುತ್ತಿದೆ. ಬಾಗಲಕೋಟೆಯ ತೇರದಾಳದಲ್ಲಿ ಅವರನ್ನು ಚುನಾವಣೆಗೆ ನಿಲ್ಲಿಸಲು ದಿಲ್ಲಿ ವರಿಷ್ಠರು ಒತ್ತಡ ಹೇರುತ್ತಿದ್ದಾರೆ ಮತ್ತು ಯಡಿಯೂರಪ್ಪ ಅದಕ್ಕೆ ನಿರಾಕರಿಸುತ್ತಿದ್ದಾರೆ ಎನ್ನುವುದು ಸದ್ಯಕ್ಕೆ ಬಿಜೆಪಿಯೊಳಗಿರುವ ಗುಸುಗುಸು.

ಈಗಾಗಲೇ ಹಲವು ದಶಕಗಳಿಂದ ಒಂದೇ ಕ್ಷೇತ್ರದಲ್ಲಿ ಬೇರೂರಿ, ಅದನ್ನೇ ಕೇಂದ್ರವಾಗಿಸಿ ಬಿಜೆಪಿಯನ್ನು ನಿಯಂತ್ರಿಸುತ್ತಾ ಬರುತ್ತಿರುವ ನಾಯಕರನ್ನು ಇನ್ನೊಂದು ಭಾಗಕ್ಕೆ ಹಾಕಿ ಅವರನ್ನು ದುರ್ಬಲಗೊಳಿಸುವುದು ಬಿಜೆಪಿ ವರಿಷ್ಠರ ತಂತ್ರವಾಗಿದೆ. ಈ ಮೂಲಕ ಪ್ರತಿಷ್ಠಿತ ನಾಯಕರ ಹಿಡಿತದಿಂದ ಬಿಜೆಪಿಯನ್ನು ಬಿಡಿಸಿಕೊಳ್ಳುವುದು ಉದ್ದೇಶ. ಯಡಿಯೂರಪ್ಪ ಅವರನ್ನು ಶಿವಮೊಗ್ಗದಿಂದ ಹೊರ ಹಾಕಿದರೆ ಸಹಜವಾಗಿಯೇ ಈಶ್ವರಪ್ಪ ಮತ್ತು ಯಡಿಯೂರಪ್ಪ ತಿಕ್ಕಾಟ ಕಡಿಮೆಯಾಗುತ್ತದೆ. ಉತ್ತರಕರ್ನಾಟಕದಂತಹ ಪ್ರದೇಶಕ್ಕೆ ಯಡಿಯೂರಪ್ಪ ವಲಸೆ ಹೋದರೆ, ಮತ್ತೆ ಶಿವಮೊಗ್ಗದ ರಾಜಕೀಯಕ್ಕೆ ಕಾಲಿಡುವುದಕ್ಕೆ ಅವರಿಗೆ ಕಷ್ಟವಾಗುತ್ತದೆ. ಜೊತೆಗೆ ಬೆಂಗಳೂರಿನಿಂದಲೂ ಅವರು ದೂರವಾಗುತ್ತಾರೆ. ಈ ಮೂಲಕ ಯಡಿಯೂರಪ್ಪ ಹಿಡಿತದಿಂದ ಬಿಜೆಪಿಯನ್ನು ರಕ್ಷಿಸುವುದು ಅವರ ಉದ್ದೇಶ.

ಯಡಿಯೂರಪ್ಪರ ನಿಯಂತ್ರಣ ಸಡಿಲವಾಗುವುದೆಂದರೆ ಆರೆಸ್ಸೆಸ್ ನಿಯಂತ್ರಣ ಬಿಗಿಯಾಗುವುದು ಎಂದರ್ಥ. ಶಿಕಾರಿಪುರದಲ್ಲಿ ನಿಂತರೆ ಯಡಿಯೂರಪ್ಪ ಗೆಲ್ಲುವ ಸಾಧ್ಯತೆ ಹೆಚ್ಚು. ಉತ್ತರಕರ್ನಾಟಕದಲ್ಲಾದರೆ ಯಡಿಯೂರಪ್ಪ ಜನರ ಜೊತೆಗೆ ಶುರುವಿನಿಂದಲೇ ಒಡನಾಟವನ್ನು ಆರಂಭಿಸಬೇಕು. ಕಾರ್ಯಕರ್ತರ, ಹಿಂಬಾಲಕರ ತಂಡವನ್ನು ಕಟ್ಟಿ ಶ್ರೀಸಾಮಾನ್ಯನನ್ನು ಒಲಿಸಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ. ಬಾಗಲಕೋಟೆಯಲ್ಲಿ ಪ್ರಾಬಲ್ಯವಿರುವ ಆರೆಸ್ಸೆಸ್ ಒಳಗೊಳಗೆ ಯಡಿಯೂರಪ್ಪರ ವಿರುದ್ಧ ಸಂಚನ್ನು ರೂಪಿಸಬಹುದು. ಆರೆಸ್ಸೆಸ್‌ನ ಸಂತೋಷ್ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ಕೈವಶ ಮಾಡಿಕೊಳ್ಳಲು ಹವಣಿಸುತ್ತಿರುವುದು ಈಗಾಗಲೇ ಮಾಧ್ಯಮಗಳ ಮೂಲಕ ಮುನ್ನೆಲೆಗೆ ಬರುತ್ತಿದೆ.

ಆರೆಸ್ಸೆಸ್‌ನ ಒಳಗಿರುವ ಬ್ರಾಹ್ಮಣ್ಯ ರಾಜಕೀಯ, ಸಂತೋಷ್‌ರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಮಾತನಾಡುತ್ತಿದೆ. ತೋರಿಕೆಗೆ ಹಿಂದುತ್ವದ ಘೋಷಣೆಯೊಂದಿಗೆ ಬಿಜೆಪಿ ರಾಜ್ಯದಲ್ಲಿ ಬೇರೂರಿದ್ದರೂ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಕುರುಬ ಎನ್ನುವ ಜಾತಿ ಹಿನ್ನೆಲೆಯಲ್ಲಿಯೇ ಹೆಚ್ಚಿನ ನಾಯಕರು ತಮ್ಮ ರಾಜಕೀಯ ಬದುಕನ್ನು ರೂಪಿಸಿಕೊಂಡಿದ್ದಾರೆ. ಇಂದಿಗೂ ಜಾತಿ ಪ್ರಾಬಲ್ಯದ ಆಧಾರದಲ್ಲೇ ನಾಯಕರಿಗೆ ಮಣೆ ಹಾಕಲಾಗುತ್ತದೆ. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದಿಂದ ಹೊರಹೊಮ್ಮಿದವರಾಗಿರುವುದರಿಂದಲೇ ಬಿಜೆಪಿ ಅವರ ಮುಂದೆ ಅಸಹಾಯಕವಾಗಿದೆ. ಯಡಿಯೂರಪ್ಪರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಬದಿಗಿಟ್ಟರೆ, ಲಿಂಗಾಯತ ಸಮುದಾಯ ಬಿಜೆಪಿಯ ವಿರುದ್ಧ ನಿಲ್ಲುತ್ತದೆ ಎನ್ನುವ ಭಯ ಆರೆಸ್ಸೆಸ್‌ಗಿದೆ. ಈ ಕಾರಣದಿಂದಲೇ ಯಡಿಯೂರಪ್ಪ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪ.

ಸಂತೋಷ್‌ರನ್ನು ಮುಖ್ಯಮಂತ್ರಿ ಮಾಡಬೇಕಾದರೆ, ರಾಜ್ಯದಲ್ಲಿ ಜಾತಿ ಲಾಬಿಗಳನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ, ಹಿಂದುತ್ವದ ಹೆಸರಲ್ಲಿ ಮತ ಯಾಚನೆ ಮಾಡಬೇಕು. ರಾಜ್ಯದಲ್ಲಿ ನಿಧಾನಕ್ಕೆ ಕೋಮು ಉದ್ವಿಗ್ನ ವಾತಾವರಣ ನಿರ್ಮಾಣವಾಗುವುದರ ಹಿಂದೆ, ಸಂತೋಷ್‌ರನ್ನು ಮುಖ್ಯಮಂತ್ರಿ ಮಾಡುವ ವರಿಷ್ಠರ ದುರುದ್ದೇಶಗಳೂ ಇವೆ.

ವರಿಷ್ಠರಿಗೆ ನೇರವಾಗಿ ಯಡಿಯೂರಪ್ಪರನ್ನು ಕಿತ್ತು ಹಾಕುವ ಧೈರ್ಯವಿಲ್ಲ. ಆದುದರಿಂದ ಉಪಾಯದಿಂದಾಗಿ ಉತ್ತರಕರ್ನಾಟಕಕ್ಕೆ ವರ್ಗಾವಣೆ ಮಾಡಿ ಅಲ್ಲಿ ಅವರನ್ನು ಸೋಲಿಸಿ ಅವರ ರಾಜಕೀಯ ಬದುಕನ್ನು ಮುಗಿಸಿ ಬಿಡುವುದು ಮತ್ತು ಖಾಲಿಯಾದ ಸ್ಥಾನಕ್ಕೆ ಸಂತೋಷ್‌ರನ್ನು ತರುವುದು ಆರೆಸ್ಸೆಸ್ ಸಂಚು. ಯಡಿಯೂರಪ್ಪ ಈ ವಾಸನೆಯ ಜಾಡು ಹಿಡಿದಿರುವುದರಿಂದ, ತಾನು ಬಾಗಲಕೋಟೆಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ, ಶಿಕಾರಿಪುರವನ್ನು ತೊರೆಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದು ದಿಲ್ಲಿ ವರಿಷ್ಠರಿಗೂ, ರಾಜ್ಯ ಆರೆಸ್ಸೆಸ್ ಮುಖಂಡರಿಗೂ ಯಡಿಯೂರಪ್ಪ ಹಾಕಿರುವ ಸವಾಲಾಗಿದೆ. ಈ ಸವಾಲಿಗೆ ವರಿಷ್ಠರು ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವರಿಷ್ಠರ ಕಾರ್ಯತಂತ್ರ ಯಡಿಯೂರಪ್ಪರಲ್ಲಿ ಇನ್ನಷ್ಟು ಅಭದ್ರತೆಯನ್ನು ಬಿತ್ತಿರುವುದು ಸುಳ್ಳಲ್ಲ. ಈ ಅಭದ್ರತೆ, ಪರಿಣಾಮಕಾರಿಯಾಗಿ ಬಿಜೆಪಿಗಾಗಿ ಕೆಲಸ ಮಾಡುವುದರಿಂದ ಅವರನ್ನು ತಡೆಯಲಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪಕ್ಷದಲ್ಲಿದ್ದೂ ಹೇಗೆ ಭೀಷ್ಮ ಒಲ್ಲದ ಮನಸ್ಸಿನಿಂದ ಯುದ್ಧ ಮಾಡಿ ಶರಶಯ್ಯೆಯನ್ನಪ್ಪಿದರೋ ಅಂತೆಯೇ ಯಡಿಯೂರಪ್ಪರ ಗತಿಯೂ ಆಗಲಿದೆ. ಭಿನ್ನಮತಗಳ ಜೊತೆ ಜೊತೆಗೇ ಮುಂದಿನ ಚುನಾವಣೆಯನ್ನು ಎದುರಿಸುವುದು ಬಿಜೆಪಿಗೆ ಸಾಧ್ಯವಿಲ್ಲ. ಇತ್ತ ಯಡಿಯೂರಪ್ಪ ಅವರೂ ಪೂರ್ಣವಾಗಿ ಚುನಾವಣೆಗೆ ತನ್ನನ್ನು ತೆರೆದುಕೊಳ್ಳುತ್ತಿಲ್ಲ. ಆದುದರಿಂದ ಯಡಿಯೂರಪ್ಪ ಶರಶಯ್ಯೆ ಸೇರುವುದು ಬಿಜೆಪಿಯ ತಕ್ಷಣದ ಅಗತ್ಯವಾಗಿದೆ ಮತ್ತು ಅದಕ್ಕೆ ಬೇಕಾದ ತಂತ್ರಗಳನ್ನು ಅದು ರೂಪಿಸುತ್ತಿದೆ. ಯಡಿಯೂರಪ್ಪರ ಶರಶಯ್ಯೆಯು ಅಂತಿಮವಾಗಿ ಬಿಜೆಪಿಯ ಸೋಲಿನೊಂದಿಗೆ ತಳಕು ಹಾಕಿಕೊಳ್ಳಲಿದೆ.

ಬಿಜೆಪಿ ಇತಿಹಾಸದಿಂದ ಪಾಠ ಕಲಿತಂತೆ ಕಾಣುವುದಿಲ್ಲ. ಬಿಜೆಪಿಯಿಂದ ಬಂಡೆದ್ದು ಕೆಜೆಪಿಯನ್ನು ಸ್ಥಾಪಿಸಿ ಬಿಜೆಪಿಯ ಭಾರೀ ಸೋಲಿಗೆ ಯಡಿಯೂರಪ್ಪ ಕಾರಣರಾದರು. ಇದೀಗ ಎರಡನೆಯ ಬಾರಿ ಬಿಜೆಪಿಯಿಂದ ಸಿಡಿಯುವ ಹಂತದಲ್ಲಿದ್ದಾರೆ ಯಡಿಯೂರಪ್ಪ. ಆದರೆ ಮತ್ತೆ ಕೆಜೆಪಿಯನ್ನು ಕಟ್ಟುವಂತಹ ಶಕ್ತಿ ಅವರಲ್ಲಿಲ್ಲ. ಅಂದಿನ ಬಹುತೇಕ ಹಿಂಬಾಲಕರು ಯಡಿಯೂರಪ್ಪರ ಜೊತೆಗಿಲ್ಲ. ಮತ್ತೆ ಪುನರ್ ಸಂಘಟಿಸುವ ಆರ್ಥಿಕ ಶಕ್ತಿ ಮತ್ತು ಆರೋಗ್ಯ ಶಕ್ತಿ ಯಡಿಯೂರಪ್ಪರಿಗಿಲ್ಲ. ಮೋದಿಯ ಅಲೆಗೆ ಸಡ್ಡು ಹೊಡೆದು ಬಿಜೆಪಿಯನ್ನು ವಿಭಜಿಸುವುದು ಕಷ್ಟ. ಆದರೆ ಯಾವುದೇ ಪಕ್ಷವನ್ನು ಹೊಸದಾಗಿ ಸ್ಥಾಪಿಸದೆಯೇ ತನ್ನ ವೈಯಕ್ತಿಕ ವರ್ಚಸ್ಸಿನ ಮೇಲೆ ಬಿಜೆಪಿಗೆ ಧಕ್ಕೆ ತರುವ ಶಕ್ತಿಯನ್ನು ಯಡಿಯೂರಪ್ಪ ಇನ್ನೂ ಹೊಂದಿದ್ದಾರೆ.

ಆರೆಸ್ಸೆಸ್ ಅಥವಾ ಬ್ರಾಹ್ಮಣ್ಯ ರಾಜಕೀಯ ಮುನ್ನೆಲೆಗೆ ಬಂದರೆ, ಬಿಜೆಪಿಯೊಳಗಿರುವ ಇತರ ಜಾತಿ ನಾಯಕರು ಜಾಗೃತರಾಗಬಹುದು. ಅದು ಬಿಜೆಪಿಗೆ ಇನ್ನಷ್ಟು ಹಾನಿಯುಂಟು ಮಾಡುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಹಿಂದುತ್ವ ಮತ್ತು ಜಾತಿ ರಾಜಕಾರಣಗಳ ನಡುವೆ ಹೊಯ್ದಾಡುತ್ತಿರುವ ಹಡಗಿನಂತೆ ಕಾಣುತ್ತಿದೆ. ಯಾವ ದಿಕ್ಕಿಗೆ ಹಡಗನ್ನು ಒಯ್ಯಬೇಕು ಎಂದು ತಿಳಿಯದೇ ತುಯ್ದಾಡುತ್ತಿರುವ ಕಪ್ತಾನನನ್ನು ಹೊಂದಿರುವ ಬಿಜೆಪಿ ದಡ ಸೇರುವುದು ಅನುಮಾನ. ಬಹುಶಃ ಬಿಜೆಪಿಯ ಈ ಗೊಂದಲಗಳ ಲಾಭವನ್ನು ಕಾಂಗ್ರೆಸ್ ಮತ್ತೆ ತನ್ನದಾಗಿಸಿಕೊಳ್ಳುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News