×
Ad

ಡಿಸೆಂಬರ್‌ ನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್: ಸಚಿವ ಬಸವರಾಜ ರಾಯರೆಡ್ಡಿ

Update: 2017-09-28 18:37 IST

ಬೆಂಗಳೂರು, ಸೆ. 28: ಸರಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಎಂಬಿಬಿಎಸ್ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಪ್ರಥಮ ವರ್ಷದ ಪದವಿ ವಾಸ್ಯಂಗ ಮಾಡುತ್ತಿರುವ 1.86 ಲಕ್ಷ ವಿದ್ಯಾರ್ಥಿಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಉಚಿತ ಲ್ಯಾಪ್‌ ಟಾಪ್ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತ ಲ್ಯಾಪ್‌ಟಾಪ್ ನೀಡುವ ಸಂಬಂಧ ಜಾಗತಿಕ ಟೆಂಡರನ್ನು ವಿಭಾಗ ಮಟ್ಟದಲ್ಲಿ ಕರೆಯಲಾಗಿದೆ. 36 ಸಾವಿರ ಎಸ್ಸಿ-ಎಸ್ಟಿ, 1.50 ಲಕ್ಷ ಇತರೆ ವರ್ಗದವರು ಸೇರಿ ಒಟ್ಟು 1.86 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ನೀಡಲಾಗುವುದು. ಇದಕ್ಕಾಗಿ ಒಟ್ಟು 275 ಕೋಟಿ ರೂ. ವೆಚ್ಚವಾಗಲಿದ್ದು, ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ಅನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಇದರಿಂದ ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕ್ರಿಮಿನಲ್ ಕೇಸ್: ಮುಕ್ತ ವಿಶ್ವ ವಿದ್ಯಾನಿಲಯ ಮಾನ್ಯತೆ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ವಿವಿಯ ಬೋಧಕ-ಬೋಧಕೇತರ ಸೇರಿ 700 ಮಂದಿ ಸಿಬ್ಬಂದಿಗೆ ಕೆಲಸವಿಲ್ಲದೆ ವೇತನ ಪಾವತಿಸಲಾಗುತ್ತಿದೆ. ಸಿಬ್ಬಂದಿಯನ್ನು ಬೇರೆ ವಿವಿಗಳಿಗೆ ಬಳಕೆ ಹಾಗೂ ವಿವಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಮುಕ್ತ ವಿವಿ ಅವ್ಯವಹಾರ, ಭ್ರಷ್ಟಾಚಾರ ಸಂಬಂಧ ಹಿಂದಿನ ಕುಲಪತಿ ಸೇರಿದಂತೆ ಇನ್ನಿತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, 11ಮಂದಿ ಕುಲಪತಿಗಳ ವಿರುದ್ಧ ಆರೋಪಗಳಿವೆ. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿ ಉನ್ನತ ಶಿಕ್ಷಣ ಇಲಾಖೆಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News