ಉಚಿತ ರೇಷನ್‌ಗಾಗಿ ನೂಕು ನೂಗ್ಗಲು: ವೃದ್ಧೆ ಸೇರಿ ಇಬ್ಬರು ಮೃತ್ಯು
ಬೆಂಗಳೂರು, ಸೆ.28: ಉಚಿತ ರೇಷನ್ ಕೂಪನ್ ಪಡೆಯುವ ವೇಳೆ ನೂಕುನೂಗ್ಗಲು ಸಂಭವಿಸಿದ ಪರಿಣಾಮ ವೃದ್ಧೆ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಯಲಹಂಕ ಬಳಿಯ ಬೆಂಗಳೂರು ಉತ್ತರ ತಾಲೂಕಿನ ಮಿಟ್ಟಗಾನಹಳ್ಳಿ ಬಳಿ ನಡೆದಿದೆ.
ರೆಹಮತ್ ಉನ್ನೀಸಾ (70) ಹಾಗೂ ಅನ್ವರ್ ಪಾಷಾ ಎಂಬವರು ಮೃತಪಟ್ಟಿರುವರು ಎಂದು ಗುರುತಿಸಲಾಗಿದೆ.
ಘಟನೆ ವಿವರ: ಶಿವಾಜಿನಗರದ ಆಸೀಫ್ ಎಂಬಾತ ಮುಸ್ಲಿಮ್ ಬಾಂಧವರಿಗೆ ಮುಂದಿನ ರಮಾಝಾನ್ ಹಬ್ಬಕ್ಕಾಗಿ ಉಚಿತ ರೇಷನ್ ಕೂಪನ್ ವಿತರಿಸಲು ವಾಟ್ಸಪ್ ಮುಖಾಂತರ ಎಲ್ಲರಿಗೂ ಸಂದೇಶ ತಲುಪುವಂತೆ ಮಾಡಿದ್ದ. ಇದರಿಂದ ಯಲಹಂಕ ಬಳಿಯ ಮಿಟಗಾನಹಳ್ಳಿಗೆ ಕಳೆದ ರಾತ್ರಿಯೇ ಸಾವಿರಾರು ಜನ ಆಗಮಿಸಿದ್ದರು ಎನ್ನಲಾಗಿದೆ.
ಗುರುವಾರ ಬೆಳಗ್ಗೆ 4 ಗಂಟೆಗೆ ರೇಷನ್ ಕೂಪನ್ ವಿತರಿಸಲು ಪ್ರಾರಂಭ ಮಾಡಲಾಗಿದ್ದು, ಸರತಿ ಸಾಲಿನಲ್ಲಿ ನಿಂತಿದ್ದ ಜನರಿಂದ ನೂಕು ನೂಗ್ಗಲು ಉಂಟಾಗಿದೆ. ಈ ವೇಳೆ ವೃದ್ಧೆ ರೆಹಮತ್ ಉನ್ನೀಸಾ ಹಾಗೂ ಅನ್ವರ್ ಪಾಷಾ ಎಂಬಾತರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಸ್ಥಳಕ್ಕೆ ಬಾಗಲೂರು ಪೊಲೀಸರು ಭೇಟಿ ನೀಡಿ ಮೃತರ ಶವಗಳನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕೇವಲ ಒಂದು ಸಾವಿರ ಜನ ಕೂಪನ್ ಪಡೆಯಲು ಬರುವುದಾಗಿ ಹೇಳಿದ್ದ ಆಸೀಫ್ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.