ಎಚ್‌ಡಿಕೆ ಆರೋಗ್ಯಕ್ಕಾಗಿ ಸರ್ವಧರ್ಮ ಪ್ರಾರ್ಥನಾ ಸಭೆ
ಬೆಂಗಳೂರು, ಸೆ.28: ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗುವಂತೆ ಹಾರೈಸಿ ಜೆಡಿಎಸ್ ಮುಖಂಡ ಡಾ.ಅನ್ವರ್ ಶರೀಫ್ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು.
ಗುರುವಾರ ನಗರದ ಎಚ್‌ಬಿಆರ್ ಬಡಾವಣೆಯಲ್ಲಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪ್ರಾರ್ಥನಾ ಸಭೆಯಲ್ಲಿ ಪಂಡಿತ್ ರವೀಶ್‌ಭಟ್, ಕ್ರೈಸ್ತ ಧರ್ಮದ ಮುಖಂಡ ಫಾ.ವರ್ಗೀಸ್ ಜಾರ್ಜ್, ಮೌಲಾನ ಮುಹಮ್ಮದ್ ಅಲಿ ಖಾಝಿ ಪಾಲ್ಗೊಂಡಿದ್ದರು.
ಅನಾರೋಗ್ಯಕ್ಕೆ ಒಳಗಾಗಿರುವ ಕುಮಾರಸ್ವಾಮಿ ಆದಷ್ಟು ಬೇಗ ಗುಣಮುಖರಾಗಿ, ರಾಜ್ಯದ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ. ಇದು ಚುನಾವಣಾ ವರ್ಷವಾಗಿರುವುದರಿಂದ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಪ್ರಾರ್ಥನೆಯಾಗಿದೆ ಎಂದು ಅನ್ವರ್ ಶರೀಫ್ ತಿಳಿಸಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಪ್ರಮಾಣದಲ್ಲಿ ಬಡವರಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮೀಯರು ಪರಸ್ಪರ ಸಹೋದರರಂತೆ ಬಾಳುತ್ತಿದ್ದಾರೆ. ಇದೇ ರೀತಿಯ ಐಕ್ಯತೆ ಇಡೀ ರಾಜ್ಯದಲ್ಲಿ ಮೂಡಿ, ನಮ್ಮ ರಾಜ್ಯವು ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಆಶಯ ಎಂದು ಅವರು ಹೇಳಿದರು.