ಅ.5ಕ್ಕೆ ಮಹರ್ಷಿ ವಾಲ್ಮೀಕಿ ಪ್ರತಿಮೆ ಲೋಕಾರ್ಪಣೆ: ಸಚಿವ ಎಚ್.ಆಂಜನೇಯ
ಬೆಂಗಳೂರು, ಸೆ. 28: ರಾಜ್ಯ ಸರಕಾರ ಘೋಷಿಸಿರುವಂತೆ ಅಕ್ಟೋಬರ್ 5ರಂದು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಭವನದ ಆವರಣದಲ್ಲಿ ವಾಲ್ಮೀಕಿ ಸಮುದಾಯ ಪುತ್ಥಳಿ ಸಿದ್ಧಪಡಿಸಿದ್ದು, ರಾಜ್ಯ ಸರಕಾರ ಉದ್ಯಾನವನ ಹಾಗೂ ಪುತ್ಥಳಿ ಸ್ಥಾಪಿಸಲು ಪೀಠ ನಿರ್ಮಿಸಿದೆ ಎಂದರು.
ಅದೇ ದಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದ ಅವರು, ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಸರಕಾರ ಸ್ಥಾಪಿಸುತ್ತಿದೆ.
ಪ್ರೊ.ಬಿ.ಕೆ.ಭವನ ಲೋಕಾರ್ಪಣೆ: ಅಕ್ಟೋಬರ್ 1ರಂದು ಹರಿಹರದ ಸಮೀಪದ ಅನಗವಾಡಿಯಲ್ಲಿರುವ ದಲಿತ ಚಳವಳಿ ಸಂಸ್ಥಾಪಕ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ನಿರ್ಮಿಸಿರುವ ಸಭಾ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಚಿವ ಆಂಜನೇಯ ಇದೇ ವೇಳೆ ತಿಳಿಸಿದರು.
ನಿಗಮಕ್ಕೆ ಚಾಲನೆ: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಭೋವಿ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಭೋವಿ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.
ಸೆ.30ರಂದು ನಾಗಪುರದಲ್ಲಿ ನಡೆಯಲಿರುವ ಸಂವಿಧಾನ ಶಿಲ್ಪಿಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಸೇರ್ಪಡೆಯಾದ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ 500 ಮಂದಿ ದಲಿತ ಸಂಘಟನೆಗಳ ಕಾರ್ಯಕರ್ತರು ದಿಕ್ಷಾಭೂಮಿಗೆ ತೆರಳಿದ್ದಾರೆ.
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ