ಕಸಮುಕ್ತ ನಗರ ನನ್ನ ಗುರಿ: ನೂತನ ಮೇಯರ್ ಸಂಪತ್ ರಾಜ್
ಬೆಂಗಳೂರು, ಸೆ.28: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಮಸ್ಯೆ ಬಗೆಹರಿಸುವ ಜೊತೆಗೆ ಮಹಿಳೆಯರು, ಮಕ್ಕಳಿಗೆ ಸುರಕ್ಷಿತ ನಗರವನ್ನಾಗಿ ಮಾಡಲು ಶ್ರಮಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಪಡೆದು ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿಯ 198 ವಾರ್ಡ್‌ಗಳಲ್ಲೂ ಆಯಕಟ್ಟಿನ ಜಾಗ, ಶಾಲಾ ಕಾಲೇಜು ಬಳಿ, ಐಟಿ-ಬಿಟಿ ಕಂಪೆನಿ ಕಚೇರಿಗಳ ಬಳಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.
ನಗರದ ಪ್ರಮುಖ 30 ರಸ್ತೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ರಕ್ಷಣಾ ಇಲಾಖೆಯೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದ್ದಾರೆ. ಅಲ್ಲದೆ, ಬಡವರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಪಾಲಿಕೆ ಆಡಳಿತ ಸುಗಮಕ್ಕೆ ರಚಿಸಿದ್ದ ಸಮನ್ವಯ ಸಮಿತಿಯ ಗೊಂದಲ ಸಮಸ್ಯೆಯನ್ನು 15 ದಿನಗಳಲ್ಲಿ ನಿವಾರಣೆ ಮಾಡಲಾಗುವುದು ಎಂದು ನುಡಿದರು.
ಕನ್ನಡಕ್ಕೆ ಒತ್ತು: 100ಕ್ಕೆ 100ರಷ್ಟು ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚದಂತೆ ತಡೆಗೆ ಎಲ್ಲಾ ಬಗೆಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.