×
Ad

ಹುಟ್ಟು ಹಬ್ಬ ದಿನದಂದೇ ಬಾಲಕರಿಬ್ಬರು ಮೃತ್ಯು

Update: 2017-09-28 20:16 IST

ಬೆಂಗಳೂರು, ಸೆ.28: ಹುಟ್ಟುಹಬ್ಬದ ಆಚರಣೆಯ ಸಂಭ್ರಮದ ವೇಳೆ ಬಾಲಕರಿಬ್ಬರು ತಂಪು ಪಾನೀಯವೆಂದು ಭಾವಿಸಿ ಆಭರಣ ಸ್ವಚ್ಛಗೊಳಿಸುವ ಗಂಧ ಕಾಮ್ಲ ಸೇವಿಸಿ ಮೃತಪಟ್ಟಿರುವ ಘಟನೆ ಇಲ್ಲಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕಿಲಾರೆ ರಸ್ತೆಯ ಚಿನ್ನಾಭರಣ ವ್ಯಾಪಾರಿ ಶಂಕರ್ ಅವರ ಪುತ್ರ ಸಾಯಿ ಶಂಕರ್(9) ಹಾಗೂ ಕಬ್ಬನ್‌ಪೇಟೆಯ ಸಂಜಯ್ ಸಿಂಗ್ ಪುತ್ರ ಆರ್ಯನ್ ಸಿಂಗ್(9) ಮೃತ ಬಾಲಕರೆಂದು ಪೊಲೀಸರು ಗುರುತಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಶಂಕರ್ ಹಾಗೂ ಸಂಜಯ್‌ ಸಿಂಗ್ ಕುಟುಂಬದವರು ಸ್ನೇಹಿತರಾಗಿದ್ದು, ಕಳೆದ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಬುಧವಾರ ರಾತ್ರಿ ಸಾಯಿ ಶಂಕರ್‌ನ ಹುಟ್ಟುಹಬ್ಬದ ಆಚರಣೆಯನ್ನು ಕುಟುಂಬದವರು ಆಚರಿಸಲು ಸಕಲ ಸಿದ್ಧತೆ ನಡೆಸಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಲು ಕಬ್ಬನ್‌ ಪೇಟೆಯಿಂದ ಆರ್ಯನ್ ಸಿಂಗ್ ಬಂದಿದ್ದ. ಹುಟ್ಟು ಹಬ್ಬದ ಕೇಕ್ ಕತ್ತರಿಸಿದ ನಂತರ ಎಲ್ಲರೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ವೇಳೆ ಶಂಕರ್ ಅವರು, ಆಭರಣಗಳನ್ನು ಸ್ವಚ್ಛಗೊಳಿಸಲು ತಂದಿಟ್ಟಿದ್ದ ಗಂಧಕಾಮ್ಲವನ್ನು ನೋಡಿ ಬಾಲಕರಿಬ್ಬರು ಕುಡಿದಿದ್ದಾರೆ ಎನ್ನಲಾಗಿದೆ.

ಗಂಧಕಾಮ್ಲ ಇಬ್ಬರು ಬಾಲಕರ ದೇಹ ಸೇರಿದ ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 

ಈ ಸಂಬಂಧ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News