×
Ad

ಮಾತೃಪೂರ್ಣ ಯೋಜನೆ ಜಾರಿಗೆ ತರಾತುರಿ ಬೇಡ: ಜಿ.ಆರ್.ಶಿವಶಂಕರ್

Update: 2017-09-28 20:28 IST

ಬೆಂಗಳೂರು, ಸೆ.28: ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆಯನ್ನು ರಾಜ್ಯ ಸರಕಾರ ಅ.2ಕ್ಕೆ ತರಾತುರಿಯಾಗಿ ಜಾರಿ ಮಾಡಲು ಹೊರಟಿದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷ ಜಿ.ಆರ್.ಶಿವಶಂಕರ್ ಆರೋಪಿಸಿದ್ದಾರೆ.

ಈಗಾಗಲೇ ಮಾತೃಪೂರ್ಣ ಯೋಜನೆಯನ್ನು ಎಚ್.ಡಿ.ಕೋಟೆ, ಜಮಖಂಡಿ, ಮಾನ್ವಿ ಹಾಗೂ ಮಧುಗಿರಿ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ಇದರ ಸಾಧಕ-ಬಾಧಕಗಳ ಕುರಿತು ಸರಕಾರಕ್ಕಾಗಲಿ, ಮಹಿಳಾ ಸಂಘಟನೆಗಳಿಗಾಗಲಿ ತಿಳಿಸದೆ ಏಕಾಏಕಿ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ. ಈ ಯೋಜನೆ ಕುರಿತು ಮಹಿಳಾ ಸಂಘಟನೆಗಳ ಜೊತೆಗೆ ಚರ್ಚಿಸದೆ ಅನುಷ್ಠಾನವಾಗ ಕೂಡದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕೇವಲ 34,957 ಸ್ವಂತ ಕಟ್ಟಡಗಳಿದ್ದು, ಸುಮಾರು 25,000ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಹುತೇಕ ಅಂಗನವಾಡಿ ಕಟ್ಟಡಗಳಲ್ಲಿ ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಇಂತಹ ಸಂದರ್ಭದಲ್ಲಿ ಅಂಗನವಾಡಿಗಳಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸೂಕ್ತ ವ್ಯವಸ್ಥೆಯಿಲ್ಲದೆ ಪೌಷ್ಟಿಕ ಆಹಾರ ನೀಡಲು ಹೇಗೆ ಸಾಧ್ಯವೆಂದು ಅವರು ಪ್ರಶ್ನಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತರ ಪಟ್ಟಿ ಅವೈಜ್ಞಾನಿಕವಾಗಿದೆ. ಈ ಮೊದಲು ಬೆಳಗ್ಗೆ 9.30ರಿಂದ 1.30ರವರೆಗೆ ಇದ್ದು, ನಂತರ ಮನೆಗಳಿಗೆ ಭೇಟಿ ಕೊಡುವುದಿತ್ತು. ಕಳೆದ ಮೂರು ವರ್ಷಗಳಿಂದ 9.30ರಿಂದ 4.30ರವರೆಗೆ ಮಾಡಲಾಗಿದೆ. ಆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

ಈಗ ಗರ್ಭಿಣಿ ಹಾಗೂ ಬಾಣಂತಿಯರ ಜವಾಬ್ದಾರಿಯನ್ನೂ ಅಂಗನವಾಡಿ ಕಾರ್ಯಕರ್ತರಿಗೆ ವಹಿಸುವುದರಿಂದ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡುವುದಕ್ಕಾಗುವುದಿಲ್ಲ. ಎಲ್ಲವೂ ಗೋಜಲು, ಗೋಜಲಾಗಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುವುದು ಅನುಮಾನವಾಗಲಿದೆ. ಇವೆಲ್ಲಾ ಸಮಸ್ಯೆಗಳ ಕುರಿತು ಕೂಲಂಕಶವಾಗಿ ಚರ್ಚಿಸಿದ ನಂತರವೇ ಮಾತೃಪೂರ್ಣ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News