ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ, ಹೃದಯ ಸಂಬಂಧಿ ರೋಗಗಳಿಂದ ದೂರವಿರಿ: ಡಾ.ಸುದರ್ಶನ್ ಬಲ್ಲಾಳ್
ಬೆಂಗಳೂರು, ಸೆ.28: ಆರೋಗ್ಯಕ್ಕೆ ಪೂರಕವಾದ ಆಹಾರ ಸೇವನೆ ಹಾಗೂ ನಿಗದಿತ ವ್ಯಾಯಾಮವನ್ನು ಬಿಡದೆ ಮಾಡುವುದರಿಂದ ಹೃದಯ ಸಂಬಂಧಿ ರೋಗಗಳು ಬರದಂತೆ ತಡೆಯಬಹದು ಎಂದು ಮಣಿಪಾಲ್ ಆಸ್ಪತ್ರೆಯ ಡಾ.ಸುದರ್ಶನ್ ಬಲ್ಲಾಳ್ ಸಲಹೆ ನೀಡಿದ್ದಾರೆ.
ಸಾರ್ವಜನಿಕರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಮಣಿಪಾಲ್ ಆಸ್ಪತ್ರೆ ‘ವಿಶ್ವ ಹೃದಯ ದಿನ’ದ ಅಂಗವಾಗಿ ‘ಹಾರ್ಟ್ ಟು ಹಾರ್ಟ್’ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೃದಯದ ಸಮಸ್ಯೆ ಮತ್ತು ಅವುಗಳನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ಮಣಿಪಾಲ್ ಆಸ್ಪತ್ರೆಯ ವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯಯುತ ಜೀವನಕ್ಕೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ದಿನದ ಸಮಯವನ್ನು ಬಿಕಾಬಿಟ್ಟಿಯಾಗಿ ಕಳೆಯುವುದಕ್ಕಿಂತ ನಿಯಮ ಬದ್ಧವಾದ ಜೀವನಕ್ಕೆ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಉತ್ತಮವಾದ ಹಾಗೂ ನಿಯಮಿತವಾದ ಆಹಾರ, ವ್ಯಾಯಾಮವನ್ನು ರೂಢಿಸಿಕೊಳ್ಳುವುದಕ್ಕೆ ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮಣಿಪಾಲ್ ಆಸ್ಪತ್ರೆ ಆಯೋಜಿಸಿರುವ ‘ಹಾರ್ಟ್ ಟು ಹಾರ್ಟ್’ ಅಭಿಯಾನವನ್ನು ಬೆಂಗಳೂರಿನ ಸಿಆರ್‌ಪಿಎಫ್ ಸೈನಿಕರು ಮತ್ತು ಕುಟುಂಬದ ಸದಸ್ಯರಿಗೆ ಸಮರ್ಪಿಸಲಾಯಿತು.
ಈ ವೇಳೆ ಸಿಆರ್‌ಪಿಎಫ್ ಕಾಂಪೊಸಿಟ್ ಆಸ್ಪತ್ರೆಯ ವೈದ್ಯೆ ಡಾ.ಎಸ್.ಸುಜಾತಾ, ಸಿನಿಮಾ ನಟಿ ಪ್ರಣೀತಾ ಸುಭಾಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.