ಶಕ್ತಿಕೇಂದ್ರದಲ್ಲಿ ಒಂದು ದಿನ ಮೊದಲೇ ಆಯುಧ ಪೂಜೆ
ಬೆಂಗಳೂರು, ಸೆ. 28: ದಸರಾ ಹಬ್ಬದ ಪ್ರಯುಕ್ತ ಸರಣಿ ರಜೆ ಇರುವುದರಿಂದ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿ ಬಹುತೇಕ ಸರಕಾರಿ ಕಚೇರಿಗಳಲ್ಲಿ ಒಂದು ದಿನ ಮೊದಲೆ ಆಯುಧ ಪೂಜೆ ನಡೆಯಿತು.
ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾ ಮಂದಿರ, ಮುಖ್ಯಮಂತ್ರಿ ಕಚೇರಿ, ಸಚಿವರ ಕಚೇರಿಗಳು, ಮುಖ್ಯ ಕಾರ್ಯದರ್ಶಿಗಳು ಕಚೇರಿಗಳು, ಸ್ಪೀಕರ್, ಸಭಾಪತಿ ಕೊಠಡಿ ಸೇರಿದಂತೆ ಬಹುತೇಕ ಎಲ್ಲ ಕಚೇರಿಗಳು, ರಂಗು-ರಂಗಿನ ರಂಗೋಲಿಗಳು, ತಳಿರು-ತೋರಣ, ಬಾಳೆಕಂದು, ಬಗೆ-ಬಗೆಯ ಪುಷ್ಪಗಳಿಂದ ಅಲಂಕೃತಗೊಂಡಿದ್ದವು.
ನಾಳೆಯಿಂದ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸರಣಿ ರಜೆ ಇರುವುದರಿಂದ ಸಚಿವಾಲಯದ ನೌಕರರೆಲ್ಲರೂ, ತಮ್ಮ ಕಚೇರಿಯಲ್ಲಿ ಇಂದೇ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಮತ್ತು ಕಳ್ಳೆಪುರಿ ಹಂಚಿ ಪರಸ್ಪರ ವಿಜಯದಶಮಿಯ ಶುಭಾಶಯ ವಿನಿಮಯ ಮಾಡಿಕೊಂಡಿದ್ದು, ಕಂಡುಬಂತು.
ಇನ್ನು ಕೆಲ ಕಚೇರಿಗಳಲ್ಲಿ ದುರ್ಗಾ ಮಾತೆ, ತಾಯಿ ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೇವತೆಗಳನ್ನು ಕೂರಿಸಿ, ವಿಶೇಷ ಅಲಂಕಾರ ಮಾಡಿ ಪೂಜಾರಿಗಳನ್ನು ಕರೆಸಿ, ಕಡ್ಡಿ-ಕರ್ಪೂರ ಹಚ್ಚಿ, ಆರತಿ ಬೆಳಗಿ ವಿಶೇಷ ಪೂಜೆ ಮಾಡಿಸಿ, ಕುಂಬಳಕಾಯಿ ಒಡೆಯುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.
ಆದರೆ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಕಚೇರಿಗೆ ಯಾವುದೇ ಅಲಂಕಾರ ಇಲ್ಲದ ಕಾರಣ ‘ಏನ್ ಸಾರ್ ನಿಮ್ಮ ಕಚೇರಿಯಲ್ಲಿ ಪೂಜೆ ಇಲ್ಲವೇ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ‘ಮೌಢ್ಯಾಚರಣೆಗಳಲ್ಲಿ ನನಗೆ ನಂಬಿಕೆ ಇಲ್ಲ, ಜನತೆಯ ಕೆಲಸದಲ್ಲಿ ತಾನು ದೇವರನ್ನು ಕಾಣುತ್ತೇನೆ’ ಎಂದು ಪ್ರತಿಕ್ರಿಯೆ ನೀಡಿದರು.
ಸೆ.29ರ ಶುಕ್ರವಾರ ಆಯುಧ ಪೂಜೆ, ಸೆ.30ರಂದು ವಿಜಯದಶಮಿ, ಅ.1ರ ರವಿವಾರ ಹಾಗೂ ಮೊಹರಂ ಕಡೇ ದಿನ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ಸರಣಿ ರಜೆಗಳಿವೆ. ಅ.3ರಂದು ಕಚೇರಿಗಳು ಪುನರ್ ಆರಂಭವಾಗಲಿವೆ. ಅ.3 ಮತ್ತು 4ರಂದು ರಜೆ ಹಾಕಿಕೊಂಡರೆ ಅ.5ಕ್ಕೆ ವಾಲ್ಮೀಕಿ ಜಯಂತಿಗೆ ರಜೆ ಇದ್ದು, ಆರೇಳು ದಿನಗಳು ಒಟ್ಟಿಗೆ ರಜೆ ಸಿಗಲಿದೆ.
‘ಬುದ್ದ, ಅಂಬೇಡ್ಕರ್ ಬಸವಣ್ಣನ ತತ್ವದಲ್ಲಿ ನಂಬಿಕೆ ಇಟ್ಟಿರುವ ತಾನು, ಪೂಜೆ, ಮೌಢ್ಯಾಚರಣೆಗಳನ್ನು ನಂಬುವುದಿಲ್ಲ. ಹೀಗಾಗಿ ನನ್ನ ಕಚೇರಿಗೆ ಇಂದು ಯಾವುದೇ ಪೂಜೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಬದಲಿಗೆ ಜನತೆಯ ಸಮಸ್ಯೆಗಳ ಪರಿಹಾರದಲ್ಲಿ ದೇವರನ್ನು ಕಾಣುತ್ತೇನೆ’
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ