ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತ: ಹಿರಿಯ ರಾಜಕಾರಣಿ ಮೊಮ್ಮಗನಿಗೆ ಥಳಿತ
ಬೆಂಗಳೂರು, ಸೆ.28: ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿದ್ದಾನೆಂದು ಆಂಧ್ರ ಪ್ರದೇಶದ ಹಿರಿಯ ರಾಜಕಾರಣಿಯಾಗಿದ್ದ ದಿ.ಆದಿಕೇಶವಲು ಅವರ ಮೊಮ್ಮಗನನ್ನು ಸಾರ್ವಜನಿಕರು ಹಿಡಿದು ಥಳಿಸಿ ಇಲ್ಲಿನ ಜಯನಗರ ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆಂಧ್ರ ಪ್ರದೇಶದ ಹಿರಿಯ ರಾಜಕಾರಣಿ ದಿ.ಆದಿಕೇಶವಲು ಅವರ ಮೊಮ್ಮಗ ವಿಷ್ಣು (27) ಎಂಬಾತನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು, ಈತ ಜಯನಗರ 1ನೆ ಬ್ಲಾಕ್ ನಿವಾಸಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ: ಬುಧವಾರ ರಾತ್ರಿ 12 ಸುಮಾರಿಗೆ ನಗರದ ಸೌತ್ ಎಂಡ್ ವೃತ್ತದಲ್ಲಿ ವಿಷ್ಣು ತನ್ನ ಬೆನ್ಝ್ ಕಾರಿನಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದು ಬಿಬಿಎಂಪಿಯ ಸೂಚನಾ ಫಲಕ ಹಾಗೂ ಓಮಿನಿ ವ್ಯಾನ್‌ಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿ ಹೊಡೆದ ಪರಿಣಾಮ ಓಮಿನಿಯಲ್ಲಿದ್ದ ಚಾಲಕ, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗಾಬರಿಗೊಂಡು ಪರಾರಿಯಾಗಲು ಮುಂದಾದ ವಿಷ್ಣುನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದ ಎರಡು ಗಂಟೆಗಳ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಕಾರನ್ನು ಜಪ್ತಿ ಮಾಡಿದರು. ಆಲ್ಕೋ ಮೀಟರ್‌ನಿಂದ ತಪಾಸಣೆ ಮಾಡಿದಾಗ ವಿಷ್ಣು ದೇಹದಲ್ಲಿ ಮದ್ಯದ ಪ್ರಮಾಣ ಇತ್ತು. ಹಾಗೂ ಥಳಿತದಿಂದ ಗಾಯಗೊಂಡಿರುವ ಆತನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ವಿಷ್ಣು ವಿರುದ್ಧ ಐಪಿಸಿ 279, 337 ಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿದ್ದರಿಂದ ಎನ್‌ಡಿಪಿಎಸ್ ಕಾಯ್ದೆ ಅಡಿ ಜಯನಗರ ಕಾನೂನು ಸುವ್ಯವಸ್ಥೆ ಠಾಣೆಯಲ್ಲೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅದೇ ರೀತಿ, ಆರೋಪಿ ವಿಷ್ಣು ಮದ್ಯಪಾನದ ಜತೆ ಮಾದಕ ವಸ್ತುವನ್ನೂ ಸೇವಿಸಿರುವ ಬಗ್ಗೆ ತಿಳಿಯಲು ಅವರ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ನಟರಿಬ್ಬರು ಇದ್ದರು?
ಘಟನೆಯಲ್ಲಿ ನಟರಾದ ಪ್ರಜ್ವಲ್ ದೇವರಾಜ್, ದಿಗಂತ್ ಕಾರಿನಲ್ಲಿದ್ದರು ಎಂದು ಕೆಲವರು ಹೇಳಿದ್ದಾರೆ. ಆದರೆ, ಅದಕ್ಕೆ ಇನ್ನೂ ಪುರಾವೆಗಳು ಸಿಕ್ಕಿಲ್ಲ. ಒಂದು ವೇಳೆ ಅವರು ಕಾರಿನಲ್ಲಿದ್ದರೂ ಅದರಲ್ಲಿ ಅವರ ತಪ್ಪೇನೂ ಇಲ್ಲ. ಇದ್ದುದೇ ನಿಜವಾದರೆ ಹೇಳಿಕೆ ದಾಖಲಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ, ಅಪಘಾತ ನಡೆದಾಗ ನಟರಿಬ್ಬರು ಎಲ್ಲಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಮೊಬೈಲ್ ಕರೆಗಳ ವಿವರ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದರು. ಆದರೆ, ಇದೆಲ್ಲಾ ಸುಳ್ಳು ಎಂದು ನಟರಿಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಕಾರು ನಾನು ಚಾಲನೆ ಮಾಡಿಲ್ಲ’
ಕಾರು ಓಡಿಸುತ್ತಿದ್ದದ್ದು ನನ್ನ ಚಾಲಕ ಸಂತೋಷ್. ನಾನು ಮುಂದಿನ ಸೀಟಿನಲ್ಲಿ ಕುಳಿತಿದ್ದೆ. ಅಪಘಾತವಾಗುತ್ತಿದ್ದಂತೆಯೇ ಆತ ವಾಹನ ಬಿಟ್ಟು ಓಡಿ ಹೋದ ಎಂದು ಆರೋಪಿ ವಿಷ್ಣು ತಿಳಿಸಿದ್ದಾನೆ. ಆದರೆ, ವಿಷ್ಣುವೇ ಚಾಲನೆ ಮಾಡುತ್ತಿದ್ದುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ತಿಳಿದು ಬಂದಿದೆ.