×
Ad

ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರ್ಗ: ರೇಣುಕಾ ಚಿದಂಬರಂ

Update: 2017-09-28 20:57 IST

ಬೆಂಗಳೂರು, ಸೆ.28: ‘ಕರ್ನಾಟಕ ವಿಷನ್-2025’ ಯೋಜನೆಯು ರಾಜ್ಯದ ಸಮಗ್ರ ಅಭಿವೃದ್ಧಿ ಮಾರ್ಗದ ನಕ್ಷೆಯಾಗಿದೆ. ಎಲ್ಲ ಇಲಾಖೆಯ ಮುಖ್ಯಸ್ಥರೊಂದಿಗೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಯೋಜನೆಯ ಸಿಇಒ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 13 ಕ್ಷೇತ್ರಗಳನ್ನು ನಾವು ಆದ್ಯತಾ ವಲಯಗಳನ್ನಾಗಿ ಗುರುತಿಸಿದ್ದು, ಆಯಾ ಕ್ಷೇತ್ರದ ತಜ್ಞರನ್ನು ಆಯ್ಕೆ ಮಾಡಿದ್ದೇವೆ. ಅಕ್ಟೋಬರ್‌ನಲ್ಲಿ ನಾವು ಪ್ರತೀ ಜಿಲ್ಲೆಗೆ ಭೇಟಿ ನೀಡುತ್ತಿದ್ದೇವೆ. ಪ್ರತೀ ಜಿಲ್ಲೆಯ ಭೇಟಿ ವೇಳೆ ಎಲ್ಲರನ್ನೂ ಕರೆದು ಅಲ್ಲಿಯ ಅಭಿವೃದ್ಧಿಯ ಬಗ್ಗೆ ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಸಾಮೂಹಿಕ ಸಹಭಾಗಿತ್ವದಲ್ಲಿ ಈ ವಿಷನ್-2025 ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ. ಸಾಮಾನ್ಯ ನಾಗರಿಕರೆ ಇದರ ಕೇಂದ್ರ ಬಿಂದು. ಪ್ರತಿದಿನ ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ನಾಗರಿಕರನ್ನು ಸಂಪರ್ಕ ಮಾಡುತ್ತೇವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಇಟ್ಟಿದ್ದೇವೆ. ರಾಜ್ಯದ ಪ್ರಗತಿಯೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಡಿಸೆಂಬರ್‌ನೊಳಗೆ ಯೋಜನೆಯ ವರದಿಯನ್ನು ಸಿದ್ಧಪಡಿಸಲಾಗುವುದು. ಆನಂತರ ಇದನ್ನು ಸರಕಾರಕ್ಕೆ ಒಪ್ಪಿಸಲಾಗುವುದು. ವರದಿಯಲ್ಲಿರುವ ಅಂಶಗಳನ್ನು ಚುನಾವಣೆಯ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದರು.

ಮುಂದಿನ 7 ವರ್ಷಗಳಿಗೆ ರಾಜ್ಯದ ಅಭಿವೃದ್ಧಿಗೆ ಅವಶ್ಯಕವಿರುವ ಎಲ್ಲ ಅಂಶಗಳ ಕುರಿತು ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇವೆ. ಅಧಿಕಾರಿಗಳಿಂದ ಉತ್ತಮ ಮಾಹಿತಿಗಳು ಸಿಕ್ಕಿವೆ. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ನಾವು ಸರಕಾರಕ್ಕೆ ಸಲ್ಲಿಸಲಿರುವ ವರದಿಯನ್ನು ಆಧರಿಸಿ ಯಾರಾದರೂ ಪ್ರಬಂಧ ಬರೆಯುವುದಾದರೆ ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ ಎಂದು ರೇಣುಕಾ ಚಿದಂಬರಂ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News