ಸರಕಾರವನ್ನು ಪ್ರತಿವಾದಿಯನ್ನಾಗಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಸೆ.28: ನಗರದ ಜೆ.ಪಿ.ಪಾರ್ಕ್ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಗುರುವಾರ ಹೈಕೋರ್ಟ್ ಸೂಚನೆ ನೀಡಿದೆ.
ತುಮಕೂರು ಮೂಲದ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಇಂದಿರಾ ಕ್ಯಾಂಟೀನ್ ರಾಜ್ಯ ಸರಕಾರದ ಯೋಜನೆ ಆಗಿರುವುದರಿಂದ ಅರ್ಜಿಯಲ್ಲಿ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಬಿಬಿಎಂಪಿ ಆಯುಕ್ತರನ್ನು ಪ್ರತಿವಾದಿಯನ್ನಾಗಿ ಮಾಡಿ ಅರ್ಜಿ ಸಲ್ಲಿಸಲಾಗಿದೆ. ಬಿಬಿಎಂಪಿಯ ಜೆ.ಪಿ. ಪಾರ್ಕ್ ವಾರ್ಡ್-17ನಲ್ಲಿ ಮುತ್ಯಾಲನಗರ, ಮತ್ತಿಕೆರೆ ವ್ಯಾಪ್ತಿಯಲ್ಲಿ ಬರುವ ಜೆ.ಪಿ. ಪಾರ್ಕ್‌ನಲ್ಲಿ ಅಕ್ಟೋಬರ್ 2ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಆದರೆ, ಇದಕ್ಕೆ ತಡೆ ಕೋರಿ ರವಿಕುಮಾರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ.