ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಎಸಿಬಿ ಸಿದ್ಧತೆ
ಬೆಂಗಳೂರು, ಸೆ.28: ಶಿವರಾಮ ಕಾರಂತ ಬಡಾವಣೆ ಜಮೀನು ಡಿನೋಟಿಫೈ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಿಸಿರುವ ಎಫ್‌ಐಆರ್ ತನಿಖೆಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆಲೋಚಿಸುತ್ತಿದೆ.
ಹೈಕೋರ್ಟ್ ನೀಡಿರುವ ಆದೇಶ ಪರಿಶೀಲಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಕಾನೂನು ವಿಭಾಗದಿಂದ ಸಲಹೆ ಪಡೆಯಲಾಗುತ್ತಿದೆ. ಈ ಸಲಹೆ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿಕೊಂಡು ಎಸಿಬಿ ನಡೆಸುತ್ತಿರುವ ತನಿಖೆಗೆ ಸೆ. 21ರಂದು ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಬಿಡಿಎ ವಶಪಡಿಸಿಕೊಂಡಿದ್ದ ಜಮೀನಿನ ಪೈಕಿ 257 ಎಕರೆ ಜಮೀನನ್ನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಯಡಿಯೂರಪ್ಪ ನಿಯಮ ಬಾಹಿರವಾಗಿ ಡಿನೋಟಿಫೈ ಮಾಡಿದ್ದರು ಎಂದು ಆರೋಪಿಸಿ ಜನ ಸಾಮಾನ್ಯರ ವೇದಿಕೆಯ ಅಧ್ಯಕ್ಷ ಡಿ.ಅಯ್ಯಪ್ಪ ಎಸಿಬಿಗೆ ದೂರು ನೀಡಿದ್ದರು.