ದೇಶವನ್ನು ದಿವಾಳಿಯಂಚಿಗೆ ತಂದು ನಿಲ್ಲಿಸಿದ ಮೋದಿ ಆರ್ಥಿಕ ನೀತಿ

Update: 2017-09-28 19:05 GMT

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಕಳೆದ ಮೂರು ವರ್ಷಗಳ ಕಾಲಾವಧಿಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಪಾತಾಳಕ್ಕೆ ಹೋಗಿದೆ ಎಂದು ಪ್ರತಿಪಕ್ಷಗಳು ಮಾತ್ರವಲ್ಲ, ಬಿಜೆಪಿ ಮತ್ತು ಸಂಘಪರಿವಾರದ ನಾಯಕರೇ ಈಗ ಹೇಳುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಹಿಂದಿನ ಹಣಕಾಸು ಸಚಿವ ಯಶವಂತ ಸಿನ್ಹಾ ಮೋದಿ ಸರಕಾರದ ಆರ್ಥಿಕ ನೀತಿಯ ಬಗ್ಗೆ ಬುಧವಾರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಂದಿನ ಆರ್ಥಿಕ ಸಚಿವ ಅರುಣ್ ಜೇಟ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಗಬ್ಬೇಳುವಂತೆ ಮಾಡಿದ್ದಾರೆ ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.

ಈ ಬಗ್ಗೆ ಸಾಕಷ್ಟು ವಿವರವಾಗಿ ಪತ್ರಿಕೆಯೊಂದಕ್ಕೆ ಲೇಖನವನ್ನು ಬರೆದಿರುವ ಅವರು, ಇದೇ ದಾರಿಯಲ್ಲಿ ಮುಂದೆ ಹೋದರೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಬೀಳುತ್ತದೆ ಎಂದು ಎಚ್ಚರಿಸಿದ್ದಾರೆ. ಯಶವಂತ ಸಿನ್ಹಾ ಹೇಳಿಕೆಗೆ ಸಹಮತವನ್ನು ವ್ಯಕ್ತಪಡಿಸಿದ ಆರೆಸ್ಸೆಸ್‌ನ ಅಂಗ ಸಂಸ್ಥೆ ಭಾರತೀಯ ಮಜ್ದೂರ್ ಸಂಘ ಕೂಡಾ ಮೋದಿ ಸರಕಾರದ ಆರ್ಥಿಕ ನೀತಿಯನ್ನು ಟೀಕಿಸುತ್ತಾ ಉದ್ಯೋಗ ರಹಿತವಾದ ಅಭಿವೃದ್ಧಿ ಮಾರ್ಗವನ್ನು ಕೈಬಿಡಬೇಕೆಂದು ಒತ್ತಾಯಿಸಿದೆ. ಉಳಿದಂತೆ ರಾಹುಲ್ ಗಾಂಧಿ ಮತ್ತು ಪಿ. ಚಿದಂಬರಂ ಕೂಡಾ ಸರಕಾರದ ಆರ್ಥಿಕ ನೀತಿಯನ್ನು ಖಂಡಿಸಿದ್ದಾರೆ.

 ಕೇಂದ್ರ ಸರಕಾರ ಕಳೆದ ವರ್ಷ ಕೈಗೊಂಡ ನೋಟು ರದ್ದತಿ ಮತ್ತು ಸರಕು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದಲೇ ಆರ್ಥಿಕ ವ್ಯವಸ್ಥೆ ಕುಸಿತ ಉಂಟಾಗಿದೆ ಎಂದು ಅರ್ಥಶಾಸ್ತ್ರಜ್ಞರೂ ಆಗಿರುವ ಯಶವಂತ ಸಿನ್ಹಾ ವಿಶ್ಲೇಷಣೆ ಮಾಡಿದ್ದಾರೆ. ನೋಟು ರದ್ದತಿ ಮತ್ತು ಜಿಎಸ್‌ಟಿಗಿಂತ ಮುಂಚೆಯೇ ಆರ್ಥಿಕ ವ್ಯವಸ್ಥೆ ಅಧೋಗತಿಯ ದಾರಿ ಹಿಡಿದಿತ್ತು. ಆದರೆ, ಜಿಎಸ್‌ಟಿಯಿಂದ ವ್ಯಾಪಾರ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು ಎಂದು ಅವರು ಹೇಳಿದ್ದಾರೆ. ಯಶವಂತ ಸಿನ್ಹಾ ಅವರಿಗಿಂತ ಮುಂಚೆ ಬಿಜೆಪಿಯ ಹಿರಿಯ ನಾಯಕರಾದ ಸಂಸತ್ ಸದಸ್ಯ ಸುಬ್ರಮಣಿಯನ್‌ಸ್ವಾಮಿ ಕೂಡಾ ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎಂದು ಹೇಳಿದ್ದರು. ಆರೆಸ್ಸೆಸ್‌ನ ಚಿಂತನ ಚಿಲುಮೆ ಎಂದೇ ಹೆಸರಾದ ಬಲಪಂಥೀಯ ಆರ್ಥಿಕ ತಜ್ಞ ಗುರುಮೂರ್ತಿ ಕೂಡಾ ದೇಶದ ಆರ್ಥಿಕ ಹೆಜ್ಜೆ ದಿವಾಳಿಯ ಅಂಚಿಗೆ ಬಂದು ನಿಂತಿದೆ ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ ನರೇಂದ್ರ ಮೋದಿಯವರ ನಿರ್ಗಮನದ ದಿನಗಳು ಸಮೀಪಿಸುತ್ತಿವೆ ಎಂದು ಕಮ್ಯುನಿಷ್ಟ್ ನಾಯಕ ಸೀತಾರಾಂ ಯೆಚೂರಿ ಈಗಾಗಲೇ ಹೇಳಿದ್ದಾರೆ. ಈ ನಡುವೆ ಜಗತ್ತಿನ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಭಾರತದ ಸ್ಥಾನ ಕುಸಿಯುತ್ತಿದೆ. ಈಗ ಅದು ನಲ್ವತ್ತನೆ ಸ್ಥಾನಕ್ಕೆ ಹೋಗಿದೆ ಎಂದು ಜಾಗತಿಕ ಆರ್ಥಿಕ ವೇದಿಕೆಯ ಸ್ಪರ್ಧಾತ್ಮಕ ಸೂಚ್ಯಂಕದ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ 137 ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿ ಸ್ವಿಟ್ಝರ್‌ಲೆಂಡ್ ಇದೆ. ಎರಡನೆ ಸ್ಥಾನದಲ್ಲಿ ಅಮೆರಿಕ, ಮೂರನೆ ಸ್ಥಾನದಲ್ಲಿ ಸಿಂಗಾಪುರ ಇದೆ. ವರ್ಷಕ್ಕೆ ಒಂದು ಕೋಟಿ ಉದ್ಯೋಗವಾಕಾಶ ಸೃಷ್ಟಿಸುವುದಾಗಿ ಚುನಾವಣೆಯ ಸಂದರ್ಭದಲ್ಲಿ ಜನತೆಗೆ ಭರವಸೆ ನೀಡಿ ಅಧಿಕಾರ ಹಿಡಿದ ನರೇಂದ್ರ ಮೋದಿ ಅವರಿಗೆ ತಮ್ಮ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹೊಸದಾಗಿ ಉದ್ಯೋಗವನ್ನು ಅರಸಿ ಬರುವ ಯುವಕರಿಗೆ ಯಾವ ಅವಕಾಶಗಳೂ ಇಲ್ಲದಂತಾಗಿದೆ ಎಂಬ ಮಾತನ್ನು ಯಶವಂತ ಸಿನ್ಹಾ ಹೇಳಿದ್ದಾರೆ. ಖಾಸಗಿ ಬಂಡವಾಳ ಹೂಡಿಕೆ ಪ್ರಮಾಣ ಕುಗ್ಗಿದೆ. ಕೈಗಾರಿಕಾ ಉತ್ಪಾದನೆ ಪಾತಾಳಕ್ಕೆ ಹೋಗಿದೆ. ಕೃಷಿ ಕ್ಷೇತ್ರದಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಡಿಪಿ ಹಿಂದೆಂದೂ ಕೇಳರಿಯದ ಪ್ರಮಾಣದಷ್ಟು ಪಾತಾಳಕ್ಕೆ ಕುಸಿದಿದೆ. ಜಿಡಿಪಿ ಕುಸಿತದ ಅಂಕಿಅಂಶಗಳು ಬೆಳಕಿಗೆ ಬಂದಾಗ ಅಮಿತ್ ಶಾ ಆರ್ಥಿಕ ಹಿನ್ನಡೆಗೆ ತಾಂತ್ರಿಕ ಅಂಶಗಳು ಕಾರಣ ಎಂದು ಕುಂಟು ನೆಪಗಳನ್ನು ನೀಡಿದರು. ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ಕುಸಿತಕ್ಕೆ ತಾಂತ್ರಿಕ ಅಂಶಗಳು ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ.

ಇದರಿಂದಾಗಿ ಇಡೀ ದೇಶವನ್ನು ಪ್ರತಿಪಕ್ಷ ಮುಕ್ತ ಭಾರತವನ್ನಾಗಿ ಮಾಡಲು ಹೊರಟ ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿಗೆ ಮುಖಭಂಗವಾಗಿದೆ. ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಅಂದರೆ, 2017ರ ಎಪ್ರಿಲ್-ಜೂನ್ ಕಾಲಾವಧಿಯಲ್ಲಿ ರೆವೆನ್ಯೂ ಕೊರತೆ ಮತ್ತು ಹಣಕಾಸು ಕೊರತೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಈ ಅಂಶವನ್ನು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ, ಇದರ ಬಗ್ಗೆ ಅಮಿತ್ ಶಾ ಉಡಾಫೆಯಾಗಿ ಮಾತನಾಡುತ್ತಿದ್ದಾರೆ.

ಸೆಪ್ಟಂಬರ್ 10ನೆ ತಾರೀಕು ಪ್ರಕಟವಾದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ವರದಿಯ ಪ್ರಕಾರ ಜಿಡಿಪಿ ಬೆಳವಣಿಗೆ ದರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5.7ಕ್ಕೆ ಕುಸಿದಿದೆ ಎಂದು ಹೇಳಲಾಗಿದೆ. ಈ ಕುಸಿತದ ಪ್ರಕ್ರಿಯೆ ಮುಂದುವರಿಯುತ್ತಲೇ ಇದೆ ಎಂದು ಎಸ್‌ಬಿಐ ವರದಿಯಲ್ಲಿ ತಿಳಿಸಲಾಗಿದೆ. ಇನ್ನೊಂದೆಡೆ ಗ್ರಾಮೀಣ ಜನರ ಪರಿಸ್ಥಿತಿ ಹದಗೆಟ್ಟಿದೆ. ಉದ್ಯೋಗ ಖಾತ್ರಿಯೋಜನೆಯ ಅಂಕಿಅಂಶ ಇದನ್ನು ದೃಢಪಡಿಸುತ್ತದೆ.

ಅರ್ಥಶಾಸ್ತ್ರಜ್ಞರ ಅಂಕಿಅಂಶಗಳು ಮಾತ್ರವಲ್ಲ ಮಾರುಕಟ್ಟೆಯಲ್ಲಿ ಜನಸಾಮಾನ್ಯರ ಜೀವನಾವಶ್ಯಕ ಪದಾರ್ಥಗಳ ಬೆಲೆಗಳೂ ಹೆಚ್ಚುತ್ತಿರುವುದು ಎಲ್ಲರ ಅನುಭವಕ್ಕೆ ಬಂದಿದೆ. ಇದರಿಂದ ಜನರ ಬದುಕು ದುಸ್ತರವಾಗಿದೆ. ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಬೆಲೆಯೇರಿಕೆಗೆ ಕಡಿವಾಣ ಹಾಕುವ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದರೂ ಉತ್ತಮ ದಿನಗಳು ಬರುತ್ತವೆ ಎಂದು ಅವರು ಹೇಳುತ್ತಲೇ ಇದ್ದಾರೆ. ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಒಂದೆಡೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಡೀಸೆಲ್ ಮತ್ತು ಪೆಟ್ರೋಲ್‌ಗಳ ಚಿಲ್ಲರೆ ದರ ಏರುತ್ತಲೇ ಇದೆ.

ಪೆಟ್ರೋಲ್ ದರದ ಪ್ರಮಾಣ 80 ರೂ. ದಾಟಿದೆ. ಡೀಸೆಲ್ ಬೆಲೆ 60 ರೂ.ನಿಂದ 70 ರೂ.ಗೆ ಹೋಗಿದೆ. ಈ ಎರಡೂ ಇಂಧನಗಳ ಬೆಲೆಯನ್ನು ಪ್ರತೀ ದಿನವೂ ಪರಿಷ್ಕರಿಸುತ್ತಿರುವ ನೀತಿಯನ್ನು ಜಾರಿಗೊಳಿಸಿದ ಬಳಿಕ ಇಂಧನ ಬೆಲೆಯಲ್ಲಿ ಶೇ.6.12ರಷ್ಟು ಏರಿಕೆಯಾಗಿದೆ. ಆಮದು ಮಾಡಿಕೊಳ್ಳಲಾದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಉಂಟಾದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಮಾರುಕಟ್ಟೆಯಲ್ಲಿ ಇಳಿದ ಕಚ್ಚಾತೈಲದ ಬೆಲೆಯ ಲಾಭವನ್ನು ಗ್ರಾಹಕರಿಗೆ ತಲುಪಿಸಲು ಸರಕಾರ ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚುತ್ತಲೇ ಇದೆ. 2014ರಿಂದೀಚೆಗೆ ಮೋದಿ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು 11 ಬಾರಿ ಏರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಇಳಿಕೆ ಉಂಟಾದರೂ ಮೋದಿ ಸರಕಾರದ ಅಬಕಾರಿ ಸುಂಕ ಹಾಗೂ ವ್ಯಾಟ್ ಏರುತ್ತಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚುತ್ತಲೇ ಇದೆ.

2014ರಿಂದ 2017ರ ವರೆಗಿನ ಕಾಲಾವಧಿಯಲ್ಲಿ ಸುಂಕ ವಸೂಲಾತಿ ಪ್ರಮಾಣ 99,184 ಕೋಟಿಯಿಂದ 2,42,691 ಕೋಟಿ ರೂ.ಗೆ ಏರಿದೆ. ಈ ರೀತಿ ಪರೋಕ್ಷ ತೆರಿಗೆಯಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಡೀಸೆಲ್ ದರ ಏರಿಕೆಯಿಂದ ರೈತರು ಮತ್ತು ಸಣ್ಣ ಉದ್ಯಮಗಳು ಸಂಕಷ್ಟದಲ್ಲಿವೆ. ಪೆಟ್ರೋಲ್ ದರ ಏರಿಕೆಯಿಂದ ಸಾರ್ವಜನಿಕರು ಮತ್ತು ಖಾಸಗಿ ವಾಹನ ಬಳಕೆ ಮಾಡುವವರು ತೊಂದರೆಗೆ ಒಳಗಾಗಿದ್ದಾರೆ. ತಾನೇ ಸ್ವಯಂ ನಿರ್ಮಿಸಿಕೊಂಡ ಈ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ವಿಪತ್ತಿನ ಅಂಚಿಗೆ ತಂದು ನಿಲ್ಲಿಸಿದ್ದು, ಇದರಿಂದ ಪಾರಾಗಲು ಯಾವ ದಾರಿಗಳೂ ಸರಕಾರದ ಬಳಿ ಇಲ್ಲ. ಅದು ಹೊರಟಿರುವುದು ಇನ್ನಷ್ಟು ವಿನಾಶಕರವಾದ ದಾರಿ.

ತನ್ನ ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನಸಾಮಾನ್ಯರಲ್ಲಿ ಭಾವನಾತ್ಮಕ ವಿಷಯಗಳನ್ನು ಕೆರಳಿಸಿ, ಕೋಮು ವೈಷಮ್ಯ ಉಂಟು ಮಾಡಲು ಮೋದಿ ಸರಕಾರ ಯತ್ನಿಸುತ್ತಿದೆ. ದೇಶವನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಲು ಜನಸಾಮಾನ್ಯರು ಹೋರಾಟದ ದಾರಿಯನ್ನು ಹಿಡಿಯುವುದು ಅನಿವಾರ್ಯವಾಗಿದೆ. ಅದನ್ನು ಬಿಟ್ಟರೆ ಇನ್ನೊಂದು ಮಾರ್ಗವಿಲ್ಲ. ಈಗಾಗಲೇ ದೇಶದ ಕಾರ್ಮಿಕ ಮತ್ತು ರೈತ ಸಂಘಟನೆಗಳು ಈ ವಿನಾಶಕಾರಿ ಆರ್ಥಿಕ ನೀತಿಯ ವಿರುದ್ಧ ನಾನಾ ಸ್ವರೂಪಗಳ ಹೋರಾಟಗಳನ್ನು ನಡೆಸುತ್ತಲೇ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News