×
Ad

ಇನ್ನು ಮುಂದೆ ಬಸ್ ಚಾಲನೆ ವೇಳೆ ಬಿಎಂಟಿಸಿ ಚಾಲಕರು ಮೊಬೈಲ್ ಬಳಸುವಂತಿಲ್ಲ..

Update: 2017-09-30 17:57 IST

ಬೆಂಗಳೂರು, ಸೆ. 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಚಾಲಕರು ಬಸ್ಸು ಚಾಲನೆಯ ವೇಳೆ ಮೊಬೈಲ್ ಬಳಸುವುದು, ಪ್ರಯಾಣಿಕರು, ಸಹ ನೌಕರರೊಂದಿಗೆ ಮಾತನಾಡುವುದು, ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುವುದು, ಅನಾವಶ್ಯಕ ವಾಗ್ವಾದ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಒಂದು ವೇಳೆ ಮೇಲ್ಕಂಡ ವರ್ತನೆ ಕಂಡುಬಂದರೆ ಅಥವಾ ಪ್ರಯಾಣಿಕರಿಗೆ ಅಧಿಕೃತ ಟಿಕೆಟು ನೀಡದೇ ಇರುವುದು, ಇತ್ಯಾದಿ ಸಂದರ್ಭಗಳಲ್ಲಿ ಪ್ರಯಾಣಿಕರು ತಮ್ಮ ದೂರನ್ನು ಸಂಸ್ಥೆಯ ಗಮನಕ್ಕೆ ಈ ಕೆಳಕಂಡ ಮೂಲಗಳ ಮುಖೇನ ನೀಡಲು ಮನವಿ ಮಾಡಲಾಗಿದೆ.

ಸೆ.29ರಂದು ಸಂಸ್ಥೆಯ ಚಾಲಕರೊಬ್ಬರು ಬಸ್ ಚಾಲನೆ ವೇಳೆ ತನ್ನ ಮೊಬೈಲ್ ಫೋನ್‌ನಲ್ಲಿ ನಿರಂತರವಾಗಿ ಮಾತನಾಡಿರುವುದು ಮತ್ತು ಅದನ್ನು ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದು, ಅವರೊಂದಿಗೆ ಚಾಲಕರು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ಬಂದಿರುತ್ತದೆ.
 ಈ ಘಟನೆಗೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಂಸ್ಥೆ, ಈ ಪ್ರಕರಣದಲ್ಲಿ ಸದರಿ ಚಾಲಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗಿದೆ. ಸಂಸ್ಥೆಯ ಸಿಬ್ಬಂದಿ ಯಾವುದೇ ಸಂದರ್ಭದಲ್ಲಿ ಯಾವುದೇ ದೂರುಗಳಿಗೆ ಅವಕಾಶ ನೀಡದೇ ತಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ನಿರ್ವಹಿಸುವ ಮೂಲಕ ಪ್ರಯಾಣಿಕರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಬೇಕು ಎಂದು ಕೋರಲಾಗಿದೆ.

ಪ್ರಯಾಣಿಕರು ದೂರುಗಳಿಗೆ ಸಂಸ್ಥೆಯ ಕಾಲ್ ಸೆಂಟರ್ -1800 425 1663 (ಟೋಲ್ ಫ್ರೀ), ಸಂಸ್ಥೆಯ ಇ-ಮೇಲ್ complaints@mybmtc.com, ಸಂಸ್ಥೆಯ www.mybmtc.com,ವೆಬ್‌ಸೈಟ್ ಸಂಸ್ಥೆಯ ಮೊಬೈಲ್ ಆಪ್, ಸಂಸ್ಥೆಯ ಸಾಮಾಜಿಕ ಜಾಲತಾಣ-follow us on facebook & twitter, ಸಂಸ್ಥೆಯ ವಾಟ್ಸಪ್ ಸಂಖ್ಯೆ-77609 99000 ಸಂಪರ್ಕಿಸಲು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News