ಮೊದಲನೆ ಬಾರಿಗೆ ನಗರದ ರಸ್ತೆಯೊಂದಕ್ಕೆ ಲೇಖಕಿಯ ಹೆಸರು
ಬೆಂಗಳೂರು, ಸೆ. 30: ನಗರದ ಪ್ರಮುಖ ರಸ್ತೆಗಳಿಗೆ ನೂತನವಾಗಿ ನಾಮಕರಣ ಸಂದರ್ಭದಲ್ಲಿ ಕನ್ನಡದ ಪ್ರಮುಖ ಲೇಖಕಿಯರ ಹೆರಸನ್ನು ಪರಿಗಣಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಒತ್ತಾಯಿಸಿದ್ದಾರೆ.
ಶನಿವಾರ ನಗರದ ದತ್ತಾತ್ರೇಯ ವಾರ್ಡ್‌ನ ಮಲ್ಲೇಶ್ವರಂನ ಮೂರನೆ ಅಡ್ಡರಸ್ತೆಗೆ ಲೇಖಕಿ ನಿರುಪಮಾ ರಸ್ತೆ ಎಂದು ನಾಮಕರಣ ಮಾಡಿದ ಬಳಿಕ ಮಾತನಾಡಿದ ಅವರು, ನಗರದಲ್ಲಿನ ರಸ್ತೆಗೆ ಇದೇ ಮೊದಲ ಬಾರಿಗೆ ಲೇಖಕಿಯ ಹೆಸರು ಇಡಲಾಗಿದೆ. ಇದು ಪರಂಪರೆ ಆಗಿ ಮುಂದುವರೆಯಬೇಕು. ಇನ್ನು ಮುಂದೆ ನಗರದಲ್ಲಿ ರಸ್ತೆಗಳಿಗೆ ನಾಮಕರಣ ಮಾಡುವ ವೇಳೆ ಲೇಖಕಿಯರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇದೇ ರಸ್ತೆಯಲ್ಲಿದ್ದ ನಿವಾಸದಲ್ಲಿ ಲೇಖಕಿ ನಿರುಪಮಾ ನಿರಂಜನ ಅವರು ಸುಮಾರು 50 ವರ್ಷಗಳಿಂದ ವಾಸವಿದ್ದರು. ಹೀಗಾಗಿ ಈ ರಸ್ತೆಗೆ ನಿರುಪಮಾ ಅವರ ಹೆಸರಿಡಬೇಕು ಎಂದು ಪಾಲಿಕೆಗೆ ಮನವಿ ಮಾಡಲಾಗಿತ್ತು. ಇಂದು ಅದು ಸಾಕಾರಗೊಂಡಿದೆ ಎಂದರು.
ಕನ್ನಡದಲ್ಲಿ ನೂರಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ಲೇಖಕಿ ನಿರುಪಮಾ ಅವರು, ಕನ್ನಡದ ಹಲವು ಕೃತಿಗಳನ್ನು ತೆಲುಗಿಗೆ ಮತ್ತು ತೆಲುಗಿನ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲೇಖಕಿಯರ ಸಂಘಟಣೆಗಾಗಿ ಕರ್ನಾಟಕ ಲೇಖಕಿಯರ ಸಂಘ ಕಟ್ಟಿ ಶ್ರಮಿಸಿದ್ದಾರೆ. ಅಲ್ಲದೆ ದಕ್ಷಿಣ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಆರ್.ಎಸ್.ಸತ್ಯನಾರಾಯಣ ಮಾತನಾಡಿ, ಮಲ್ಲೇಶ್ವರಂನ ಮೂರನೆ ಅಡ್ಡರಸ್ತೆಗೆ ಲೇಖಕಿ ನಿರುಪಮಾ ಹೆಸರಿಡಲು ಪಾಲಿಕೆ ಸಭೆಯಲ್ಲಿ ಒಂದೇ ಬಾರಿ ಒಪ್ಪಿಗೆ ಸಿಕ್ಕಿತ್ತು. ಅಲ್ಲದೆ ಲೇಖಕಿ ನಿರುಪಮಾ ಹೆಸರಿಡುವ ಕುರಿತು ಪಾಲಿಕೆ ಸಂಗ್ರಹಿಸಿದ್ದ ಸಾರ್ವಜನಿಕ ಅಭಿಪ್ರಾಯದಲ್ಲಿ ಯಾವುದೇ ಆಕ್ಷೇಪವೂ ಕೇಳಿಬರಲಿಲ್ಲ. ಇದು ನಿರುಪಮಾ ಅವರ ಸಾಹಿತ್ಯ ಕೃಷಿಯಲ್ಲಿನ ಸಾಧನೆಗೆ ಹಿಡಿದ ಕನ್ನಡಿ ಎಂದು ಬಣ್ಣಿಸಿದರು.
ದತ್ತಾತ್ರೇಯ ವಾರ್ಡ್‌ನಲ್ಲಿರುವ ರಸ್ತೆಗಳಿಗೆ ಲೇಖಕಿಯರ ಹೆಸರಿಡಲು ಮನವಿಗಳು ಬಂದರೆ ಸ್ವಾಗತ. ಮುಂದೆ ರಸ್ತೆಗಳಿಗೆ ಹೆಸರಿಡುವ ವೇಳೆ ಲೇಖಕಿಯ ಹೆಸರನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ ಸೇರಿದಂತೆ ಇತರರು ಇದ್ದರು.