ಸಮ್ಮೇಳನಾಧ್ಯಕ್ಷ ಚಂಪಾ

Update: 2017-09-30 18:37 GMT

ಕನ್ನಡ ಕಾವ್ಯಕ್ಕೆ ಚಂಪಾರ ಕೊಡುಗೆ ದ್ವಿದಳವಾದದ್ದು. ಕವಿಯಾಗಿ ಕಾವ್ಯ ರಚನೆಯಲ್ಲಿ ಹೊಸಹಾದಿಗಳನ್ನು ಅನ್ವೇಷಿಸತೊಡಗಿದ ಚಂಪಾ, ಪತ್ರಕರ್ತರಾಗಿ ಕನ್ನಡ ಕಾವ್ಯದ ಪೋಷಣೆಗೆ ಟೊಂಕಕಟ್ಟಿ ನಿಂತರು. ನವ್ಯ ಕಾವ್ಯದ ಐತಿಹಾಸಿಕ ಹೆಜ್ಜೆಗಳನ್ನು ಗುರುತಿಸುವಾಗ ಅಡಿಗರ ‘ಸಾಕ್ಷಿ’ಯಂತೆಯೇ ‘ಸಂಕ್ರಮಣ’ದ ಕೊಡುಗೆಯನ್ನೂ ಗಮನಿಸಬೇಕಾಗುತ್ತದೆ. ನವ್ಯಕಾವ್ಯ ಪೋಷಣೆಯಲ್ಲಿ ‘ಸಂಕ್ರಮಣ’ದ ಪಾಲು ಮಹತ್ತರವಾದುದು.


ಕನ್ನಡದ ಕಣ್ಣದು ಮೈಸೂರು

ಬೆಳೆಯುವ ನಾಡದು ಮೈಸೂರು
ನಾಲುಮಡಿ ಕೃಷ್ಣನ
ಮೈಸೂರು.
ಈ ಮೈಸೂರಿನಲ್ಲಿ ನವೆಂಬರ್ 24ರಿಂದ ನಡೆಯಲಿರುವ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಈ ಸಲದ ವೈಶಿಷ್ಟ್ಯವೆಂದರೆ ಅಧ್ಯಕ್ಷರಾಗಿ ಕವಿ ಚಂದ್ರಶೇಖರ ಪಾಟೀಲರು ಆಯ್ಕೆಹೊಂದಿರುವುದು. ಪ್ರತೀ ಸಮ್ಮೇಳನಕ್ಕೂ ಒಬ್ಬರು ಅಧ್ಯಕ್ಷರನ್ನು ಆಯ್ಕೆಮಾಡುವುದು ಸಂಪ್ರದಾಯ. ಆ ಸಂಪ್ರದಾಯದಂತೆ ಈ ಸಲವೂ ಅಧ್ಯಕ್ಷರೊಬ್ಬರ ಆಯ್ಕೆ ಆಗಿದೆ, ಅದರಲ್ಲಿ ವಿಶೇಷವೇನಿದೆ ಎಂದು ಮೂಗುಮುರಿಯ ಬೇಡಿ. ಚಂಪಾ ಎಂದೇ ಕರ್ನಾಟಕದ ಉದ್ದಗಲ ಚಿರಪರಿಚಿತರಾದ ಚಂದ್ರಶೇಖರ ಪಾಟೀಲರು ಕವಿಯಷ್ಟೇ ಅಲ್ಲ. ಈ ಕವಿಯೊಳಗೊಬ್ಬ ವಿಚಾರವಾದಿ ಇದ್ದಾನೆ, ಕನ್ನಡ ಹೋರಾಟಗಾರನಿದ್ದಾನೆ, ಬಂಡಾಯಗಾರನಿದ್ದಾನೆ, ಮಿಗಿಲಾಗಿ ಹಿಂದುತ್ವ ರಾಜಕಾರಣದ ಕಟು ವಿಮರ್ಶಕನಿದ್ದಾನೆ. ಸಮ್ಮೇಳನದ ಅಧ್ಯಕ್ಷ ಪೀಠದಿಂದ ಇವರೆಲ್ಲರೂ ಏಕಕಾಲದಲ್ಲಿ ಹತ್ತಿಮತ್ತೂರಿನ ಕನ್ನಡದಲ್ಲಿ ದನಿಗೈಯಲಿದ್ದಾರೆ. ಅವರು ಮೊಳಗಿಸಲಿರುವ ಈ ಸ್ವರ ಮೇಳವೇ ಸಮ್ಮೇಳನದ ವೈಶಿಷ್ಟ್ಯವಾಗಲಿದೆ. ಅದು ಕೆಲವರಿಗೆ ಇಂಪಾಗಿರಬಹುದು, ಇನ್ನು ಕೆಲವರಿಗೆ, ಕಿವಿಗೆ ಕಾದ ಸೀಸ ಸುರಿದಂತಾಗಲೂಬಹುದು.

ಚಂಪಾಗೆ ಈಗ ಎಪ್ಪತ್ತೆಂಟರ ಪ್ರಾಯ. ಅವರು ಹುಟ್ಟಿದ್ದು ಹಾವೇರಿ ಜಿಲ್ಲೆ ಹತ್ತಿಮತ್ತೂರಿನಲ್ಲಿ, 1939ರ ಜೂನ್ 18ರಂದು. ಬಾಲ್ಯದ ವಿದ್ಯಾಭ್ಯಾಸ ಹಾವೇರಿಯಲ್ಲಿ, ಹೈಸ್ಕೂಲ್‌ವರೆಗೆ. ಮುಂಬೈ ಎಸೆಸೆಲ್ಸಿ ಬೋರ್ಡಿನ ರ್ಯಾಂಕ್ ವಿಜೇತ ಚಂದ್ರಶೇಖರ ಬಸವರಾಜ ಪಾಟೀಲರ ಹಲವು ಜೀವಸ್ವರಗಳ ಪಯಣ ಇಲ್ಲಿಂದಲೇ ಶುರು. ಧಾರವಾಡಕ್ಕೆ ಹೋದರು, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಬಿ.ಎ., ಎಂ.ಎ., ಪದವೀಧರರಾದರು(1960-62). ಕನ್ನಡ ನವ್ಯ ಕಾವ್ಯ ಮಾರ್ಗ ಪ್ರವರ್ತಕರಲ್ಲಿ ಮೊದಲಿಗರಾದ ವಿ.ಕೃ.ಗೋಕಾಕರು ಇಲ್ಲಿ ಚಂಪಾಗೆ ಇಂಗ್ಲಿಷ್ ಸಾಹಿತ್ಯ ಕಲಿಸಿದ ಗುರುಗಳು. ಕರ್ನಾಟಕ ಕಾಲೇಜಿನಲ್ಲಿ ಲೆಕ್ಚರಿಕೆ ಮಾಡುತ್ತಲೇ ಕಾವ್ಯಕೃಷಿಮಾಡಿ ‘ಬಾನುಲಿ’ಯಲ್ಲಿ ಕಾವ್ಯ ಲಹರಿ ಬಿತ್ತರಿಸಿ ಕವಿ ಎನಿಸಿಕೊಂಡರು. ನಂತರ ‘ಮಧ್ಯಬಿಂದು’(1964), ‘ಹತ್ತೊಂಬತ್ತು ಕವನಗಳು’(1967), ‘ಗಾಂಧೀ ಸ್ಮರಣೆ’(1976) ಸಾಲುಗಟ್ಟಿ ಬಂದು ಚಂಪಾಗೆ ಕವಿಪಟ್ಟ ಗಟ್ಟಿಯಾಯಿತು.

ಜೊತೆಗೆ ಗಿರಡ್ಡಿ ಮತ್ತು ಪಟ್ಟಣಶೆಟ್ಟಿ ಸಾಂಗತ್ಯದಲ್ಲಿ ‘ಸಂಕ್ರಮಣ’ ಪ್ರಾರಂಭಿಸಿ ಸಾಹಿತ್ಯ ಪತ್ರಿಕಾ ವೃತ್ತಿಯಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟರು. ಕಾವ್ಯ ಕನ್ನಿಕೆಯೊಂದಿಗೆ ಹೀಗೆ ಪರಿಪರಿಯಾಗಿ ಕೋರ್ಟ್‌ಶಿಪ್ ನಡೆಸಿದ್ದಾಗಲೇ ಇಂಗ್ಲೆಂಡಿನಿಂದ ಉನ್ನತ ವ್ಯಾಸಂಗಕ್ಕೆ ಕರೆ ಬಂತು. ಲೀಡ್ಸ್ ಯೂನಿವರ್ಸಿಟಿಯಿಂದ ಭಾಷಾ ಶಾಸ್ತ್ರದಲ್ಲಿ ಮತ್ತೊಂದು ಎಂ.ಎ. ಪದವಿಯ ಗರಿ ಸಿಕ್ಕಿಸಿಕೊಂಡರು. ಮಾಸ್ತರಿಕೆ ಮುಂದುವರಿಸಲು ಧಾರವಾಡಕ್ಕೆ ವಾಪಸಾದರು.

ಕನ್ನಡ ಕಾವ್ಯಕ್ಕೆ ಚಂಪಾರ ಕೊಡುಗೆ ದ್ವಿದಳವಾದದ್ದು. ಕವಿಯಾಗಿ ಕಾವ್ಯ ರಚನೆಯಲ್ಲಿ ಹೊಸಹಾದಿಗಳನ್ನು ಅನ್ವೇಷಿಸತೊಡಗಿದ ಚಂಪಾ, ಪತ್ರಕರ್ತರಾಗಿ ಕನ್ನಡ ಕಾವ್ಯದ ಪೋಷಣೆಗೆ ಟೊಂಕಕಟ್ಟಿ ನಿಂತರು. ನವ್ಯ ಕಾವ್ಯದ ಐತಿಹಾಸಿಕ ಹೆಜ್ಜೆಗಳನ್ನು ಗುರುತಿಸುವಾಗ ಅಡಿಗರ ‘ಸಾಕ್ಷಿ’ಯಂತೆಯೇ ‘ಸಂಕ್ರಮಣ’ದ ಕೊಡುಗೆಯನ್ನೂ ಗಮನಿಸಬೇಕಾಗುತ್ತದೆ. ನವ್ಯಕಾವ್ಯ ಪೋಷಣೆಯಲ್ಲಿ ‘ಸಂಕ್ರಮಣ’ದ ಪಾಲು ಮಹತ್ತರವಾದುದು.

ಈಚಿನ ದಿನಗಳಲ್ಲಿ ಚಂಪಾ ಎಂದರೆ ಅವರ ಬಂಡಾಯತನದ ಛಾಪೇ ಢಾಳವಾಗಿ ಕಾಣುತ್ತದೆ. ಅವರ ವ್ಯಂಗ್ಯ-ವಿಡಂಬನೆ ಚಾಟೂಕ್ತಿಗಳು ಕಾವ್ಯಕ್ಕಿಂತ ಒಂದು ತೂಕ ಹೆಚ್ಚಾಗಿಯೇ ರಸಿಕರ ಮನಸೆಳೆದಿವೆ. ಹೀಗೆಂದ ಮಾತ್ರಕ್ಕೆ ಚಂಪಾ ಬರೀ ವಿಡಂಬನ ಬಂಡಾಯಗಾರರು ಮಾತ್ರ ಎಂದರ್ಥವಲ್ಲ. ಕ್ರಾಂತಿ, ಬಂಡಾಯ ಎಂದಾಕ್ಷಣ ಹಿಂದಿನದೆಲ್ಲವನ್ನೂ ನಿರಾಕರಿಸುವುದು, ತಿರಸ್ಕರಿಸುವುದು ಎಂಬ ಅತಿಯೊಂದಿದೆ. ಇದು ಸರಿಯಲ್ಲ. ಜಗತ್ತಿನ ಎಲ್ಲ ಕ್ರಾಂತಿಗಳೂ ಇತಿಹಾಸ ಬದಲಿಸುವ ಅತ್ಯುಗ್ರ ಹೆಜ್ಜೆಯಾದರೂ ಅವು ಪರಂಪರೆಯನ್ನು ನಿರಾಕರಿಸಿಲ್ಲ. ಹೊಸ ಅಸ್ಮಿತೆ ಹುಡುಕುವ, ಎಲ್ಲ ಬಗೆಯ ಸಾಮಾಜಿಕ ಶೋಷಣೆ ವಿರುದ್ಧ ಸಿಡಿಯುವ ಚಂಪಾ ಅವರ ಬಂಡಾಯ ಕಾವ್ಯವೂ ಪರಂಪರೆಯನ್ನು ನಿರಾಕರಿಸುವುದಿಲ್ಲ. ಕಾವ್ಯದ ಮಟ್ಟಿಗಷ್ಟೇ ಹೇಳುವುದಾದರೂ, ನವೋದಯದಿಂದ ಬಿಡಿಸಿಕೊಂಡು

ಹೊಸ ಕಾವ್ಯ ಸೃಷ್ಟಿಸುವ ತುರ್ತು ಉಮೇದಿನಲ್ಲೂ ಚಂಪಾ-
‘‘ಹೋಗಿಬರ್ತೇನಜ್ಜ ಹೋಗಿ ಬರ್ತೇನೆ
ನಿನ್ನ ಪಾದ ಧೂಳಿಯು ಹಣೆ ಮೇಲೆ ಮಾತ್ರವಿರಲಿ,
ಕಣ್ಣೊಳಗೆ ಬೀಳೋದು ಬೇಡ’’
    ಎನ್ನುವಲ್ಲಿ ಪರಂಪರೆಯನ್ನು ಸಾರಾಸಗಟು ತಿರಸ್ಕರಿಸದಿರುವ ಹಾಗೆಯೇ ಕುರುಡು ಭಕ್ತಿಯಿಂದ ಆರಾಧಿಸದಿರುವ ಎಚ್ಚರವನ್ನೂ ಕಾಪಾಡಿಕೊಂಡಿದ್ದಾರೆ. ಅಂತೆಯೇ ನವ್ಯಕಾವ್ಯದ ಬಗ್ಗೆಯೂ. ಅರುವತ್ತರಲ್ಲಿ ಶುರುವಾಗಿ ಎಪ್ಪತ್ತರ ದಶಕದ ಅಂತ್ಯದ ವೇಳೆಗೇ ನವ್ಯ ಕಾವ್ಯ ಮಾರ್ಗವೂ ದಡ್ಡುಬಿದ್ದ ಮಾರ್ಗವಾಗುವ ಸೂಚನೆಗಳು ಕಂಡುಬಂದಾಗ ಚಂಪಾ ಬರೆದ ‘ಐವತ್ತರ ಅಡಿಗರು’, ನವ್ಯ ಕಾವ್ಯದ ಕಾಲದ ಮುಕ್ತಾಯವನ್ನು ವ್ಯಂಗ್ಯವಿಡಂಬನೆಗಳಿಲ್ಲದೆ, ನೇರವಾಗಿ ಐತಿಹಾಸಿಕ ಸತ್ಯವೆಂಬಂತೆ ಮಾರ್ಮಿಕವಾಗಿ ನುಡಿದಿದೆ:
ಚಂಡೆ ಸಪ್ಪಳ ಕೇಳೀ,
ಗೊಂದಲಾಪುರವಾಸಿನೀ ಈ ಸುವಾಸಿನಿ;
ನಿನ್ನೆ ಮೊನ್ನೆ

ಏಳು ಮಲ್ಲಿಗೆ ಮೊಗ್ಗೆ ತೂಗಿದ ನಮ್ಮ ಕವಿತಾ ಕನ್ಯೆ
ಇದ್ದಕ್ಕಿದ್ದಂತೆ ದೊಡ್ಡವಳಾಗಿ
ಹೂವಾಗಿ ಕಾಯಾಗಿ
ಸಟ್‌ಸಟ್ ಸಟ್
1,2,3..

ಮಕ್ಕಳ ತಾಯಾಗಿ
ಈಗ ಆಗಿದ್ದಾಳೆ ಹಣ್ಣು
ಇದು, ಪರಂಪರೆಯನ್ನು ಮರೆಯದೆ ಗೌರವಿಸಿಯೂ ಅದರ ಭಾರವನ್ನು ಕೆಳಗಿಳಿಸಿ ಮುಂದೆ ತಮ್ಮ ದಾರಿ ಕಂಡುಕೊಳ್ಳುವ ಚಂಪಾ ಪರಿ. ಹೀಗೆ ಸಮಕಾಲೀನ ಕವಿಗಳಲ್ಲಿ ಮುಖ್ಯರಾದ ಚಂಪಾ ಅವರ ಸೃಜನಶೀಲ ಅಸ್ಮಿತೆಯ ವೈಶಿಷ್ಟ್ಯವನ್ನು ಅವರ ಮಾತುಗಳಲ್ಲೇ ಗುರುತಿಸ ಬಹುದಾಗಿದೆ:

‘‘...ನಿರಂತರ ಚಲನಶೀಲವಾದ ಕಾಲಕ್ಕೆ ಸಂವಾದಿಯಾಗಬೇಕಾದ ಕಾವ್ಯ ಸದಾ ನಿಗಿನಿಗಿ ಅನ್ನುವ ಬದುಕನ್ನು ಬಗೆಯಬೇಕು, ಅಗಿಯಬೇಕು. ಸೂತ್ರೀಕರಣ ವಿಮರ್ಶಕರಿಗೆ ಹೇಳಿ ಮಾಡಿಸಿದ್ದು; ಸೂತ್ರೀಕರಣದಿಂದಲೇ ವಿಮರ್ಶೆಗೆ ಒಂದು ಸುರಕ್ಷಿತತೆಯ ಭಾವನೆ ಬರುತ್ತದೆ. ಆದರೆ ಕವಿಗಳಿಗೆ ಇದು ಯಾವಾಗಲೂ ಉಲ್ಲಂಘನೆಗೆ ಯೋಗ್ಯ....’’

ಚಂಪಾ ಅವರ ಕವಿತೆಗಳು ಮತ್ತು ನಾಟಕಗಳಲ್ಲಿ ಈ ಲಂಘನ- ಉಲ್ಲಂಘನಗಳನ್ನು ನಾವು ಧಾರಾಳವಾಗಿ ಕಾಣುತ್ತೇವೆ.

ಈ ಉಲ್ಲಂಘನ ಪ್ರವೃತ್ತಿಯೇ ಚಂಪಾ ಅವರ ಬಂಡಾಯದ ಮೂಲವಿರಬಹುದು. 1979ರಲ್ಲಿ ಕನ್ನಡದಲ್ಲಿ ಬಂಡಾಯ ಸಾಹಿತ್ಯದ ದನಿ ಗಟ್ಟಿಯಾಗಿ ಕೇಳ ತೊಡಗಿದಾಗ ಹತ್ತಿಮತ್ತೂರಿನ ಕನ್ನಡದಲ್ಲಿ ಅದು ಪ್ರತ್ಯೇಕವಾಗಿ ಕೇಳಿಬಂತು. ಅವರ ಪ್ರತಿಭಟನೆ, ಬಂಡಾಯಗಳ ಪ್ರವೃತ್ತಿ ಕೇವಲ ಕಾವ್ಯ/ನಾಟಕಗಳ ರಚನೆಗಷ್ಟೇ ಸೀಮಿತವಾಗಲಿಲ್ಲ. ಮನೋಕೇಂದ್ರಿತವಾಗಿದ್ದ ಪ್ರತಿಭಟನೆ ಬಂಡಾಯಗಳು ಗೋಕಾಕ್ ಚಳವಳಿಯಲ್ಲಿ(1980)ಭೌತಿಕವಾಗಿಯೂ ಸಾಕಾರಗೋಂಡು, ಚಂಪಾರೊಳಗಿದ್ದ ಚಳವಳಿಗಾರ/ಹೋರಾಟಗಾರನೊಬ್ಬನನ್ನು ನಾವು ಕಾಣುವಂತಾಯಿತು. ಗೋಕಾಕ್ ಚಳವಳಿಯೊಂದಿಗೇ ಕನ್ನಡ ಚಳವಳಿಯಲ್ಲೂ ಸಕ್ರಿಯವಾಗಿ ತೊಡಗಿಕೊಂಡ ಚಂಪಾ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿಯಾಗಿ(1982) ಹಾಗೂ ಸ್ವಾಭಿಮಾನಿ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷರಾಗಿ ನಾಡುನುಡಿಯ ಕಾಯಕಕ್ಕೆ ಕಟಿಬದ್ಧರಾದರು. ಕನ್ನಡದ ಕೆಲಸ ಬೊಗಸೆ ಭರ್ತಿ ಇದ್ದಾಗಲೂ ಅವರ ಸೃಜನಶೀಲ ಒರತೆ ಬತ್ತಲಿಲ್ಲ. ಇದೇ ಅವಧಿಯಲ್ಲಿ ‘ಶಾಲ್ಮಲಾ ನನ್ನ ಶಾಲ್ಮಲಾ’ ಮತ್ತು ‘ಗುಂಡಮ್ಮನ ಹಾಡು’ ಕವನ ಸಂಕಲನಗಳು ಪ್ರಕಟವಾದವು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ(1996-99), ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ(2004) ಕನ್ನಡದ ಸತ್ವವ್ಯಾಪಕತೆಗಳನ್ನು ಹೆಚ್ಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಥಿಕ ಶಕ್ತಿಯನ್ನು ವಿಸ್ತೃತಗೊಳಿಸಿ ಪರಿಷತ್ತನ್ನು ನಿರಂತರ ಹೋರಾಟಕ್ಕೆ ಅಣಿಗೊಳಿಸಿದ ಖ್ಯಾತಿಗೆ ಪಾತ್ರರಾದರು. ಕನ್ನಡದ ಕುತ್ತಿಗೆ ಹಿಚುಕುತ್ತಿದ್ದ ಶಾಲೆಗಳ ವಿರುದ್ಧ ಚಳವಳಿ, ಮಾತೃಭಾಷಾ ಮಾಧ್ಯಮ ಆಂದೋಲನ, ‘ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಜಾಥಾ-ಮೊದಲಾದ ಚಳವಳಿಗಳ ಸಂಘಟನೆ ಮೂಲಕ ಸಾಹಿತ್ಯ ಪರಿಷತ್ತಿಗೆ ಹೋರಾಟದ ದೀಕ್ಷೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು 2007ರಲ್ಲಿ ಜ್ಞಾನಪೀಠ ಪ್ರಶಸ್ತಿಗಿಂತ ಮಿಗಿಲಾದ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಚಂಪಾ ಅಧಿಕಾರಾವಧಿಯ ಸಾಧನೆಯ ಅಗ್ಗಳಿಕೆಗಳಲ್ಲೊಂದು. ಸುಮಾರು ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಹಲವು ನಾಟಕಗಳು, ಲೇಖನಗಳು, ಲಲಿತ ಪ್ರಬಂಧಗಳು-ಹೀಗೆ ಚಂಪಾ ಅವರ ಸಾಹಿತ್ಯ ಕೃಷಿ ಸಮೃದ್ಧವಾದದ್ದು. ಸಮಗ್ರ ಕಾವ್ಯ, ಸಮಗ್ರ ನಾಟಕ ಸಂಪುಟಗಳೂ ಪ್ರಕಟಗೊಂಡಿವೆ. ಚಂಪಾ ಅವರ ಸಾಹಿತ್ಯವನ್ನು ಸಾಣೆಗೆ ಹಿಡಿಯುವಷ್ಟು ಸುಲಭಸಾಧ್ಯವಲ್ಲ ಅವರ ವ್ಯಕ್ತಿತ್ವದ ವಿಮರ್ಶೆ. ಚಂಪಾ ಬದುಕು ಮತ್ತು ಸಾಹಿತ್ಯಗಳನ್ನು ಬೇರೆಬೇರೆಯಾಗಿ ನೋಡಿದವರಲ್ಲ.

ಮಾತುಕೃತಿಗಳಲ್ಲಿ ತಾಳೆ ಇರಬೇಕು ಎಂಬುದನ್ನು ದೃಢವಾಗಿ ನಂಬಿದವರು. ಈ ನಂಬಿಕೆಯೂ ಗೌರೀಶ ಕಾಯ್ಕಿಣಿಯವರು ಹೇಳಿರುವಂತೆ, ವೈಚಾರಿಕ ಆವೇಶ (ಮಾರಲ್ ಪ್ಯಾಷನ್) ಮತ್ತು ಮಾನವೀಯ ಸಹಾನುಭೂತಿಗಳ ಅಂದವಾದ ಸಮನ್ವಯದಿಂದ ಹುಟ್ಟಿದ್ದು. ಅವರ ವೈಚಾರಿಕತೆಯಲ್ಲಿ ಚಿಕಿತ್ಸಕ ಗುಣ ಇರುವುದನ್ನೂ ಗೌರೀಶರು ಗುರುತಿಸಿದ್ದಾರೆ. ಚಂಪಾ ದೃಷ್ಟಿ ಎಷ್ಟು ಹರಿತವೋ ಅವರ ನಿಲುವುಗಳೂ ಒಮ್ಮಿಮ್ಮೆ ಅಷ್ಟೇ ಹಟಮಾರಿತನದವು. ‘ಆಚಾರ ಹೇಳುವುದಕ್ಕೆ ಬದನೇಕಾಯಿ ತಿನ್ನುವುದಕ್ಕೇ’ ಎಂದು ಅವರು ಯಾವತ್ತೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ಇಂಥ ಇಬ್ಬಂದಿತನ ಕಂಡಾಗ ಎಷ್ಟೇ ದೊಡ್ಡವರಿರಲಿ, ಅಭಿಮಾನಿಗಳಿಗೆ ಪೂಜನೀಯರಿರಲಿ ಅದಾವ ಮುಲಾಜನ್ನೂ ನೋಡದೆ ಗುಲಗಂಜಿಯ ಕಪ್ಪನ್ನು ಬಯಲುಗೊಳಿಸುವುದರಲ್ಲಿ ಚಂಪಾ ಹಿಂದೆಮುಂದೆ ನೋಡರು. ಅವರ ಈ ದಾರ್ಷ್ಟ್ಯ ಹಿರಿಕಿರಿಯರನೇಕರಲ್ಲಿ ಕಸಿವಿಸಿಯುಂಟುಮಾಡಿರುವ ಸಂದರ್ಭಗಳಿಗೆ ಲೆಕ್ಕವಿಲ್ಲ. ಆದರೆ ಇದರಿಂದ ಅವರು ಸ್ನೇಹ-ಪ್ರೀತಿಗಳಿಗೆ ಚ್ಯುತಿ ಮಾಡಿಕೊಂಡವರಲ್ಲ. ಟೀಕಿಸಿದ ಮರುಗಳಿಗೆಯಲ್ಲೇ ‘‘ಆರಾಮಿದೀರಲ್ರೀ’’ ಎಂದು ಬರಸೆಳೆದುಕೊಳ್ಳುವ ಅಂತಃಕರಣ. ಚಂಪಾ ಅವರ-
ಪ್ರೀತಿ ಇಲ್ಲದೆ
ನಾನು ಏನನ್ನೂ ಮಾಡಲಾರೆ
ದ್ವೇಷವನ್ನೂ ಕೂಡ

ಈ ಸಾಲುಗಳು ಅವರ ವ್ಯಕ್ತಿ ವಿಶೇಷವನ್ನು ಸಾಕಾರಗೊಳಿಸುವ ರೂಪಕವೂ ಹೌದು. ಚಂಪಾ ಎಂದೇ ಪ್ರಖ್ಯಾತರಾದ ಚಂದ್ರಶೇಖರ ಬಸವರಾಜ ಪಾಟೀಲರಿಗೆ ಬಂದಿರುವ ಪ್ರಶಸ್ತಿ ಪುರಸ್ಕಾರಗಳ ಲೆಕ್ಕವನ್ನು ಅವರೇ ಇಟ್ಟಿರಲಿಕ್ಕಿಲ್ಲ. ಕನ್ನಡ ನಾಡು ನುಡಿಯನ್ನು ಅವರೆಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿಗೌರವಗಳನ್ನು ನಾಡಿನ ಸಮಷ್ಟಿ ಅವರಿಗೆ ತೋರಿದೆ ಎಂದರೆ ಅದು ಉತ್ಪ್ರೇಕ್ಷೆಯಾಗದು. ಈಗ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ. ಇದು ನಾಡು ತೋರುವ ಪರಮ ಗೌರವ. ಪ್ರಜೆಗಳ ಬಾಯಿಕಟ್ಟಿದ ತುರ್ತುಪರಿಸ್ಥಿತಿಯಲ್ಲಿ ಬರೆಯುವ/ಮಾತನಾಡುವ ಸ್ವಾತಂತ್ರ್ಯದ ಹಕ್ಕಿಗಾಗಿ ಜೈಲಿಗೂ ಹೋಗಿ ಬಂದವರು. ಸತ್ಯ ನುಡಿದ ಸಂಶೋಧಕ ಎಂ.ಎಂ.ಕಲಬುರ್ಗಿಯವರ ಹತ್ಯೆಗೆ ಪ್ರತಿಭಟಿಸಿ ಪಂಪ ಪ್ರಶಸ್ತಿಯನ್ನು ಸರಕಾರಕ್ಕೆ ಹಿಂದಿರುಗಿಸಿದವರು. ಇಂಥ ಚಂಪಾರನ್ನು ಈಗ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಅರಸಿ ಬಂದಿದೆ-ಅದೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಘೋಷಿತ ತುರ್ತುಪರಿಸ್ಥಿತಿಯ ಇಂದಿನ ಸಂದರ್ಭದಲ್ಲಿ. ನಾಡು ಅವರ ನುಡಿಗಳಿಗಾಗಿ ಎದುರು ನೋಡುತ್ತದೆ.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News