ಸ್ಟೇಡಿಯಂನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಕ್ರಿಕೆಟಿಗ

Update: 2017-10-01 10:47 GMT

ಲಾಹೋರ್, ಅ.1: ಆಯ್ಕೆಗಾರರು ತನಗೆ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ ಎಂಬ ಬೇಸರದಲ್ಲಿ ಪಾಕ್ ನ ಕ್ರಿಕೆಟಿಗನೋರ್ವ ಸ್ಟೇಡಿಯಂನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಪ್ರಥಮ ದರ್ಜೆ ಕ್ರಿಕೆಟ್ ನ ಪಾಕಿಸ್ತಾನದ ಆಟಗಾರ ಗುಲಾಮ್ ಹೈದರ್ ಅಬ್ಬಾಸ್ ಆತ್ಮಹತ್ಯೆಗೆ ಯತ್ನಿಸಿದ ಕ್ರಿಕೆಟಿಗ.

ಲಾಹೋರ್ ಸಿಟಿ ಕ್ರಿಕೆಟ್ ಅಸೋಸಿಯೇಶನ್ ಗ್ರೌಂಡ್ ನಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಗುಲಾಮ್ ಯತ್ನಿಸಿದ್ದಾರೆ. ಈ ಸಂದರ್ಭ ಅಲ್ಲಿದ್ದ ಕೆಲವರು ಇದನ್ನು ಗಮನಿಸಿದ್ದು, ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

ಲಾಹೋರ್ ಅಸೋಸಿಯೇಶನ್ ನ ಪೂರ್ವ ವಲಯಕ್ಕೆ ಸೇರಿದ ಕ್ರಿಕೆಟಿಗರಾಗಿದ್ದಾರೆ ಗುಲಾಮ್. ಲಾಹೋರ್ ತಂಡದಲ್ಲಿ ತನಗೆ ಆಡಲು ಅವಕಾಶ ಸಿಗುತ್ತದೆ ಎನ್ನುವ ಆಯ್ಕೆ ಸಮಿತಿಯ ಸುಳ್ಳು ಭರವಸೆಯನ್ನು ಕೇಳಿ ಬೇಸತ್ತು ಆತ್ಮಹತ್ಯಗೆ ಯತ್ನಿಸಿದ್ದಾಗಿ ಅವರು ವಿವರಿಸಿದ್ದಾರೆ.

“ಕ್ಲಬ್ ಹಾಗೂ ಝೋನಲ್ ವ್ಯಾಪ್ತಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೆ. ಆದರೆ ಅವರು ನನ್ನನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಏಕೆಂದರೆ ನಾನು ಬಡವ. ಕೊನೆಗೆ ನಾನು ಲಾಹೋರ್ ತಂಡದಲ್ಲಿ ಆಡಬೇಕಾದರೆ ಲಂಚ ನೀಡಬೇಕು ಎಂದು ಅವರು ಹೇಳಿದರು. ಇದರಿಂದಾಗಿ ನಾನು ಮನನೊಂದು ಆತ್ಮಹತ್ಯೆಗೆ ಯತ್ನಿಸಿದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News