ಸಚಿವ ಆಂಜನೇಯರನ್ನು ಸಂಪುಟದಿಂದ ವಜಾ ಮಾಡಿ: ಯಡಿಯೂರಪ್ಪ
ಬೆಂಗಳೂರು, ಅ.1: ಆಯುಧ ಪೂಜೆಯ ಬಗ್ಗೆ ಹಗುರವಾಗಿ ಮಾತನಾಡಿ ಜನರ ಭಾವನೆಗಳಿಗೆ ಘಾಸಿ ಉಂಟು ಮಾಡಿರುವ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ರವಿವಾರ ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ವಿಧಾನಸೌಧ ಇರುವುದು ಜನರ ಸೇವೆಗೆ ಹೊರತು, ಕುಂಬಳಕಾಯಿ ಒಡದು, ಕರ್ಪೂರ ಹಚ್ಚಲು ಅಲ್ಲ' ಎಂಬ ಹೇಳಿಕೆ ನೀಡಿದ ಆಂಜನೇಯ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಜನ ಸಾಮಾನ್ಯರ ಭಾವನೆಗಳಿಗೆ ವಿರುದ್ಧ, ಜನವಿರೋಧಿ ಧೋರಣೆ ಸರಿಯಲ್ಲ. ಇಂತಹ ವ್ಯಕ್ತಿಗಳನ್ನು ಸಚಿವ ಸಂಪುಟದಲ್ಲಿ ಇಟ್ಟುಕೊಳ್ಳುವುದು ಅಕ್ಷಮ್ಯ. ಮುಖ್ಯಮಂತ್ರಿ ಸಿದ್ದರಾಮುಯ್ಯ ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪೂಜೆ-ಪುರಸ್ಕಾರಗಳ ಬಗ್ಗೆ ಸಚಿವ ಆಂಜನೇಯ ವೈಯಕ್ತಿಕವಾಗಿ ತಮ್ಮದೇ ಆದ ದೃಷ್ಟಿಕೋನ ಹೊಂದಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ, ಒಬ್ಬ ಜವಾಬ್ದಾರಿಯುತ ಸಚಿವರಾಗಿ ಅವರು ಜನತೆಯ ಭಾವನೆಗಳ ಜೊತೆ ಚೆಲ್ಲಾಟವಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಆಯುಧ ಪೂಜೆಯನ್ನು ಮಾಡುವವರೆಲ್ಲ ತಪ್ಪು ಮಾಡುತ್ತಿದ್ದಾರೆಂಬ ಸಚಿವ ಆಂಜನೇಯರ ಹೇಳಿಕೆ ಅವರ ಜನ ವಿರೋಧಿ ಮಾನಸಿಕತೆಯನ್ನು ತೋರಿಸುತ್ತದೆ ಎಂದ ಅವರು, ಸಂಪುಟದಿಂದ ಅವರನ್ನು ಕೂಡಲೇ ಕಿತ್ತುಹಾಕದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಹಿಂದೂ ಜಾಗರಣಾ ವೇದಿಕೆಯ ಜಗದೀಶ್ ಕಾರಂತ್ ಬಂಧನ ಸರಿಯಲ್ಲ. ಇದು ಸರಕಾರದ ನಾಚಿಕೆಗೆಟ್ಟ ಸಂಗತಿಗೆ ಕನ್ನಡಿ ಹಿಡಿದಿದೆ ಎಂದು ಟೀಕಿಸಿದರು.
ಮುಂದಿನ ವರ್ಷವೂ ನಾನೇ ದಸರಾ ಉದ್ಘಾಟಿಸುವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಜನತೆ ತೀರ್ಮಾನ ಮಾಡಲಿದ್ದಾರೆ. ಅದಕ್ಕೂ ಮೊದಲೇ ಸಿಎಂ ಹೇಳಿಕೆ ಸಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ದಸರಾ ಪೂಜೆ ನಾನೇ ನೆರವೇರಿಸುವೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ