ರಾಜಕಾರಣಿಗಳ ನಿರ್ಲಕ್ಷ್ಯವೇ ಕಾಸರಗೋಡು ಕೇರಳ ಪಾಲಾಗಲು ಕಾರಣ: ಡಾ.ಸಿದ್ದಲಿಂಗಯ್ಯ
ಬೆಂಗಳೂರು, ಅ.1: ಕರ್ನಾಟಕದ ರಾಜಕಾರಣಿಗಳು ಹಾಗೂ ಸಂಘ-ಸಂಸ್ಥೆಗಳ ನಿರ್ಲಕ್ಷ್ಯದಿಂದ ಕಾಸರಗೋಡು ಕೇರಳ ಪಾಲಾಗಲು ಕಾರಣ ಎಂದು ಹಿರಿಯ ಸಾಹಿತಿ ಹಾಗೂ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಹೊಂಬಾಳೆ ಪ್ರತಿಭಾರಂಗದಿಂದ ಕಯ್ಯಾರ ಕಿಞ್ಞಣ್ಣ ರೈ ನೆನಪಿನಾರ್ಥವಾಗಿ ಆಯೋಜಿಸಿದ್ದ ಕವಿದನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇರಳದ ಮೊದಲ ಮುಖ್ಯಮಂತ್ರಿಯಾಗಿದ್ದ ನಂಬೂದರಿಪಾಡ್ ತಮ್ಮ ಪಕ್ಷದ ಪತ್ರಿಕೆಗೆ ಬರೆದ ಲೇಖನದಲ್ಲಿ ಕಾಸರಗೋಡು ನ್ಯಾಯಯುತವಾಗಿ ಕರ್ನಾಟಕ್ಕೆ ಸೇರಿದ್ದು ಎಂದು ಉಲ್ಲೇಖಿಸಿದ್ದರು ಎಂದರು.
ಅಂದಿನ ಸರಕಾರ ಹಾಗೂ ಸಂಘಟನೆಗಳು, ರಾಜಕಾರಣಿಗಳು ಉತ್ಸಾಹ ಹಾಗೂ ಬೆಂಬಲ ನೀಡಿದ್ದರೆ, ನಂಬೂದರಿಪಾಡ್ ಕಾಸರಗೋಡನ್ನು ಕರ್ನಾಟಕಕ್ಕೆ ಒಪ್ಪಿಸುಬಿಡುತ್ತಿದ್ದರು. ಆದರೆ, ಅಂದು ಹಿಂದೆ ಸರಿದರು. ಹೀಗಾಗಿ, ಮಹಾಜನ್ ಸಮಿತಿ ಸಲ್ಲಿಸಿದ ವರದಿ ಅನ್ವಯ ಕೇರಳಗೆ ಅದನ್ನು ಸೇರಿಸಿದರು. ಇದರ ಪರಿಣಾಮವಿಂದು ಅಲ್ಲಿನ ಕನ್ನಡಿಗರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಾಭಿಮಾನ: ರಾಜ್ಯದ ಜನತೆ ಕಾಸರಗೋಡಿನವರಿಂದ ಕನ್ನಡಾಭಿಮಾನವನ್ನು ಕಲಿಯಬೇಕು. ಗಡಿನಾಡಿನಲ್ಲಿರುವ ಕಾಸರಗೋಡಿನ ವಿದ್ಯಾರ್ಥಿಗಳು ಕನ್ನಡದಲ್ಲಿ ಪಠ್ಯ-ಪುಸ್ತಕಗಳು ಬೇಕೆಂದು ಕೇಳುತ್ತಾರೆ. ಆದರೆ, ಕರ್ನಾಟಕದ ಜನರು ದಿನನಿತ್ಯ ಅತ್ಯುತ್ತಮ ಆಂಗ್ಲ ಮಾಧ್ಯಮ ಶಾಲೆಗಳನ್ನು ಹುಡುಕುತ್ತಾರೆಂದು ಹೇಳಿದರು.
ಕನ್ನಡಕ್ಕಾಗಿ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವರು ಹಾಗೂ ಕಾಸರಗೋಡನ್ನು ಕೇರಳಕ್ಕೆ ಸೇರಿದಾಗ ದುಃಖಪಟ್ಟಂತಹವರು ಕವಿ ಕಯ್ಯೆರ ಕಿಞ್ಞಣ್ಣ ರೈ. ಅಲ್ಲದೆ, ಕಿಞ್ಞಣ್ಣ ರೈ ಒಬ್ಬ ಪ್ರಗತಿಪರ ಚಿಂತಕನಾಗಿದ್ದು, ಕನ್ನಡದ ಬಗ್ಗೆ ಅಪಾರವಾದ ಪ್ರೀತಿಯುಳ್ಳವರಾಗಿದ್ದರು. ವರ್ಗರಹಿತ, ವರ್ಣ ರಹಿತ ಸಮಾಜ ನಿರ್ಮಾಣವಾಗಬೇಕು ಎಂದು ಬಯಸಿದವರು. ಸಮಾಜಮುಖಿ ಕವಿ, ಸ್ವಾತಂತ್ರ ಹೋರಾಟಗಾರರಾಗಿದ್ದ ಅವರು, ಅತ್ಯುತ್ತಮ ಕೃಷಿಕರು ಮತ್ತು ರಾಜಕಾರಣಿಯಾಗಿದ್ದರು ಎಂದು ನುಡಿದರು.
ನಮ್ಮ ದೇಶದಲ್ಲಿ ಇಂದಿಗೂ ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿಯಿಲ್ಲ ಎಂದ ಅವರು, ಸ್ವಾತಂತ್ರ ದಿನಾಚರಣೆ ಅಥವಾ ಇನ್ನಿತರೆ ದಿನಾಚರಣೆಗಳ ವೇಳೆ ತಲೆಕೆಳಗಾಗಿ ರಾಷ್ಟ್ರ ಧ್ವಜವನ್ನು ಹಾರಿಸುವ ಅಧಿಕಾರಿಗಳು, ರಾಜಕಾರಣಿಗಳು ಇರುವುದು ದುರಂತ. ಇಂತ ಸಂದರ್ಭದಲ್ಲಿ ಕಿಞ್ಞಣ್ಣ ರೈ ರಾಷ್ಟ್ರವೆಂದರೆ ಮೂರು ಬಣ್ಣಗಳುಳ್ಳ ಬಟ್ಟೆಯ ಬಾವುಟವಲ್ಲ, ಅದು ನಮ್ಮ ಪ್ರತೀಕದ ಸಂಕೇತ ಎಂಬ ಸಂದೇಶ ಸಾರಿದ್ದಾರೆ ಎಂದರು.
ಕಾಸರಗೋಡಿನ ಜನರ ಧ್ವನಿಗೆ ಬೆಂಬಲವಾಗಿ ಧ್ವನಿಗೂಡಿಸುವುದು ಕೈಯಾರ ಕಿಞ್ಞಣ್ಣ ರೈ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕವಯತ್ರಿ ಪ್ರೊ.ಸುಕನ್ಯಾ ಮಾರುತಿ, ಕಯ್ಯಾರ ಕಿಞ್ಞಣ್ಣ ರೈ ಪುತ್ರ ಡಾ.ಪ್ರಸನ್ನ ರೈ, ಶ್ರೀಮತಿ ಜಯರಾಂ, ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿದ್ದರು.