ಕಲುಷಿತ ನೀರು ಕುಡಿದು 60 ಮಂದಿ ಆಸ್ಪತ್ರೆಗೆ ದಾಖಲು
ಬೆಂಗಳೂರು, ಅ.1: ಒಳಚರಂಡಿ ಪೈಪ್‌ಲೈನ್ ಒಡೆದು ಕಲುಷಿತಗೊಂಡ ನೀರು ಕುಡಿದು 60 ಕ್ಕೂ ಹೆಚ್ಚು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದ ಬಿಟಿಎಂ ಲೇಔಟ್‌ನ 10ನೆ ಕ್ರಾಸ್‌ನಲ್ಲಿ ಸಂಭವಿಸಿದೆ.
ನಗರದ ಬಿಟಿಎಂ ಲೇಔಟ್‌ನ 5ನೆ ಕ್ರಾಸ್‌ನಲ್ಲಿರುವ ಒಳಚರಂಡಿ ಒಡೆದು ಹೋಗಿದ್ದು, ಕಳೆದ ಮೂರು ದಿನಗಳಿಂದ ಮನೆಗಳಿಗೆ ಸರಬರಾಜು ಆಗುತ್ತಿರುವ ಕುಡಿಯುವ ನೀರಿಗೆ ಈ ಕಲುಷಿತ ನೀರು ಮಿಶ್ರಣವಾಗಿ ಬರುತ್ತಿದೆ. ಆದರೆ, ಪೈಪ್‌ಲೈನ್ ಸರಿಪಡಿಸುವಂತೆ ಬಿಬಿಎಂಪಿ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಲುಷಿತ ನೀರು ಕುಡಿದ ಪರಿಣಾಮ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ವಾಂತಿ, ಭೇದಿ, ಜ್ವರದಂತಹ ಖಾಯಿಲೆಗಳಿಂದ ಸಾರ್ವಜನಿಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೂ, ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಅಲ್ಲದೆ, ಇದೇ ನೀರನ್ನು ಸ್ನಾನಕ್ಕೆ ಬಳಸಬೇಕಾಗಿದೆ. ಆದರೆ, ನೀರು ಕೆಟ್ಟ ವಾಸನೆ ಬರುತ್ತಿದೆ ಹಾಗೂ ವಾಸಸ್ಥಳದ ಸುತ್ತಮುತ್ತ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರದ ಗೃಹ ಸಚಿವ ರಾಮಲಿಂಗಾರೆಡ್ಡಿಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದೆ. ಇದುವರೆಗೂ 60 ಜನ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಬಿಡಬ್ಲ್ಯುಎಸ್‌ಎಸ್‌ಪಿಯಿಂದ ಯಾರೂ ಭೇಟಿ ನೀಡಿಲ್ಲ. ಜಲಮಂಡಳಿ ಪೈಪ್‌ಲೈನ್ ಸರಿಮಾಡುವ ಗೋಜಿಗೆ ಹೋಗಿಲ್ಲ. ಈಗಲಾದರೂ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.