×
Ad

ಜಿಎಸ್‌ಟಿ ತೆರಿಗೆ ವ್ಯಾಪ್ತಿಯಿಂದ ಖಾದಿ ಉತ್ಪನ್ನಗಳನ್ನು ಕೈ ಬಿಡಲು ಆಗ್ರಹ

Update: 2017-10-01 20:20 IST

ಬೆಂಗಳೂರು, ಅ.1: ಖಾದಿ ವಸ್ತ್ರಗಳ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ವಿಧಿಸುವ ಮೂಲಕ ರಾಷ್ಟ್ರಪಿತ ಗಾಂಧೀಜಿ ಅವರಿಗೆ ಅಪಮಾನ ಮಾಡಿದೆ. ಕೂಡಲೇ ಖಾದಿ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ಹಿಂಪಡೆಯಬೇಕು ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಕುಮಾರ್ ಜಾಗಿರ್ದಾರ್ ಆಗ್ರಹಿಸಿದ್ದಾರೆ.

ರವಿವಾರ ನಗರದ ಗಾಂಧಿಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗಾಂಧಿಜಯಂತಿ ಪ್ರಯುಕ್ತ ಕ್ರಿಸ್ಪ್ ಸಂಸ್ಥೆ ಆಯೋಜಿಸಿದ್ದ ಗಾಂಧಿವಾದದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಖಾದಿ ವಸ್ತ್ರಗಳ ಮೇಲೆ ಕೇಂದ್ರ ಸರಕಾರ ತೆರಿಗೆ ವಿನಾಯಿತ ನೀಡಬೇಕಿತ್ತು. ಆದರೆ ಕಾದಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವ ಕ್ರಮ ಸರಿಯಲ್ಲ. ಕೂಡಲೆ ಖಾದಿ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಗಾಂಧಿ ಅವರ ಮದ್ಯಪಾನವನ್ನು ಕಟುವಾಗಿ ವಿರೋಧಿಸುತ್ತಿದ್ದರು. ಆದರೆ ದೇಶದಲ್ಲಿ ಮದ್ಯಪಾನಿ ಮತ್ತು ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗಿರುವುದು ದುರದುಷ್ಟಕರ. ಕೂಡಲೇ ಕೇಂದ್ರ ಸರಕಾರ ಎಲ್ಲ ರಾಜ್ಯಗಳಲ್ಲಿ ಮದ್ಯಪಾನ ಮತ್ತು ಮಾದಕವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪ್ರಬುದ್ಧ ದೇಶ ನಿರ್ಮಾಣಕ್ಕೆ ಗಾಂಧಿತತ್ವಗಳು ಸಹಕಾರಿ. ಹೀಗಾಗಿ ಗಾಂಧಿವಾದವನ್ನು ಪ್ರತಿಯೊಬ್ಬರು ಮೈಗೂಡಿಸಕೊಳ್ಳಬೇಕು. ಗಾಂಧಿವಾದದ ಕುರಿತು ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪರಿಸರವಾದಿ ಅರುಣ್ ಪ್ರಸಾದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಷ್ಟದಲ್ಲಿರುವ ಖಾದಿ ಉದ್ಯಮಕ್ಕೆ ಕೇಂದ್ರ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ದೇಶದ ಪ್ರಗತಿಗೆ ಕಂಟಕವಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರಕಾರ ಗುಡಿಕೈಗಾರಿಕೆಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ಗಾಂಧಿ ಗೀತಗಾಯನದೊಂದಿಗೆ ಗಾಂಧಿ ಚಿಂತನೆ ಮತ್ತು ಆದರ್ಶಗಳನ್ನು ಪ್ರಚುರಪಡಿಸಿದರು. ಗಾಂಧಿತತ್ವಗಳ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News