×
Ad

ನೋಡಲ್ ಅಧಿಕಾರಿಗಳ ಸೇವೆ ತೆಗೆಯದಂತೆ ಹೈಕೋರ್ಟ್ ಸೂಚನೆ

Update: 2017-10-01 20:24 IST

ಬೆಂಗಳೂರು, ಅ.1: ರಾಜೀವ್‌ಗಾಂಧಿ ವಸತಿ ನಿಗಮದಡಿ ರಾಜ್ಯದ ಎಲ್ಲ ತಾಲೂಕು ನೋಡಲ್ ಅಧಿಕಾರಿಗಳನ್ನು ಅ.11ರವರೆಗೆ ಸೇವೆಯಿಂದ ತೆಗೆಯಬಾರದು ಎಂದು ರಾಜ್ಯ ಸರಕಾರ ಮತ್ತು ವಸತಿ ನಿಗಮಕ್ಕೆ ಮಧ್ಯಾಂತರ ನಿರ್ದೇಶನವನ್ನು ಹೈಕೋರ್ಟ್ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವೆಂಕಟೇಶ್ ಹಾಗೂ ಬಿ.ಡಿ.ರಾಮಚಂದ್ರಪ್ಪ ಸೇರಿ 150 ತಾಲೂಕು ನೋಡಲ್ ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಎಚ್.ಬಿ.ಪ್ರಭಾಕರಶಾಸ್ತ್ರಿ ಅವರಿದ್ದ ರಜಾಕಾಲದ ಪೀಠ. ಈ ಆದೇಶ ನೀಡಿ ವಿಚಾಣೆಯನ್ನು ಅ.11ಕ್ಕೆ ಮುಂದೂಡಿತು.

ಸೆ.2ರಂದು ವಸತಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ತಾಲೂಕುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೋಡಲ್ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸುವ ಸಂಬಂಧ ಕ್ರಮ ಜರಗಿಸುವಂತೆ ಸೂಚಿಸಿದ್ದರು. ಆ ಪತ್ರ ಆಧರಿಸಿ ಯಾವುದೇ ಮುಂದಿನ ಕ್ರಮ ಜರಗಿಸದಂತೆ ಮುಖ್ಯ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಲ್ಲ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರಗಳ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
   ರಾಜ್ಯ ಸರಕಾರ ರೂಪಿಸಿದ ವಸತಿ ಯೋಜನೆಗಳನ್ನು ತಾಲೂಕು, ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡಲು ರಾಜೀವ್‌ಗಾಂಧಿ ವಸತಿ ನಿಗಮದಡಿ 2010ರಲ್ಲಿ 242 ತಾಲೂಕು ನೋಡಲ್ ಅಧಿಕಾರಿಗಳನ್ನು ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಂತರ ಕಾಲ ಕಾಲಕ್ಕೆ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ, 2016ರ ಮಾ.30ವರೆಗೆ ಅವರ ಸೇವೆಯನ್ನು ಮುಂದುವರಿಸಿಕೊಂಡು ಬಂದಿತ್ತು.
  ಈ ಮಧ್ಯೆ 2014ರಲ್ಲಿ ತಮ್ಮ ಸೇವೆ ಕಾಯಂಗೊಳಿಸುವಂತೆ ತಾಲೂಕು ನೋಡಲ್ ಅಧಿಕಾರಿಗಳು ಸರಕಾರ ಮತ್ತು ನಿಗಮಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಆ ಮನವಿ ಪರಿಗಣಿಸಿರಲಿಲ್ಲ. ಬದಲಾಗಿ ಅಧಿಕಾರಿಗಳನ್ನು ಸೇವೆಯಿಂದ ಬಿಡುಡೆಗೊಳಿಸಲು ನಿಗಮ ಉದ್ದೇಶಿಸಿತ್ತು.
ಸರಕಾರದ ಈ ಕ್ರಮ ಪ್ರಶ್ನಿಸಿ 2015ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಏಕಸದಸ್ಯ ಪೀಠ, 2017ರ ಸೆ.2ರಂದು ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಅದನು್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News