×
Ad

ರಾಮರಾಜ್ಯದ ಕನಸು-ನನಸು ಮಾಡಲು 'ಮಾತೃಪೂರ್ಣ' ಯೋಜನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-10-02 18:44 IST

ಬೆಂಗಳೂರು, ಅ. 2: 'ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕಾದರೆ ಸಮಾಜದಲ್ಲಿ ಯಾರೊಬ್ಬರೂ ಅಪೌಷ್ಟಿಕತೆಯಿಂದ ನರಳಬಾರದೆಂಬ ಮಹತ್ವದ ಉದ್ದೇಶದಿಂದ ಸರಕಾರ 'ಮಾತೃಪೂರ್ಣ' ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ 'ಮಾತೃಪೂರ್ಣ ಯೋಜನೆ'ಗೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿ ಮಹಿಳೆಯರು ಪೌಷ್ಟಿಕಾಂಶ ಹೊಂದಿ ಆರೋಗ್ಯವಂತರಾಗಿದ್ದರೆ, ಮಾತ್ರ ಮಕ್ಕಳು ಆರೋಗ್ಯವಂತರಾಗಿರಲು ಸಾಧ್ಯ. ರಾಜ್ಯದಲ್ಲಿ ಸುಮಾರು 10ಲಕ್ಷಕ್ಕೂ ಹೆಚ್ಚು ಗರ್ಭಿಣಿ ಹಾಗೂ ಬಾಣಂತಿಯರಿದ್ದು, ಆ ಪೈಕಿ ಬಹಳಷ್ಟು ಜನರಿಗೆ ಪೌಷ್ಟಿಕಾಂಶವುಳ್ಳ ಆಹಾರ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ 'ಮಾತೃಪೂರ್ಣ' ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ನವಜಾತ ಶಿಶುವಿಗೆ ತಾಯಂದಿರ ಎದೆ ಹಾಲು ಮುಖ್ಯ. ಆದರೆ, ತಾಯಂದಿರ ಎದೆ ಹಾಲು ಪೌಷ್ಟಿಕಾಂಶದಿಂದ ಕೂಡಿರಬೇಕಾದರೆ ಅವರಿಗೆ ಪೌಷ್ಟಿಕಾಂಶವುಳ್ಳ ಆಹಾರ ದೊರಕಬೇಕೆಂದ ಅವರು, ಗರ್ಭಿಣಿ ಮಹಿಳೆಯರಿಗೆ ಅನ್ನ, ಸಾಂಬಾರ್, ಕೊಳಿಮೊಟ್ಟೆ, ಮೊಳಕೆಕಾಳು, ಸೊಪ್ಪಿನ ಪಲ್ಯ, ಹಾಲು, ಶೆಂಗಾ-ಬೆಲ್ಲದ 'ಚಿಕ್ಕಿ'ಯುಳ್ಳ ಪೌಷ್ಟಿಕಾಂಶವುಳ್ಳ ಆಹಾರವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ವಿವರಿಸಿದರು.

ಮೊದಲ ರಾಜ್ಯ: ಆಂಧ್ರ-ತೆಲಂಗಾಣ ರಾಜ್ಯಗಳನ್ನು ಹೊರತುಪಡಿಸಿದರೆ ಕರ್ನಾಟಕ ರಾಜ್ಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶವುಗಳ್ಳ ಆಹಾರ ನೀಡಲು ಮಾತೃಪೂರ್ಣ ಯೋಜನೆ ರೂಪಿಸಿದ ರಾಜ್ಯ ಎಂಬುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.

ಸಮಾಜದಲ್ಲಿ ಯಾರೂ ಆಹಾರ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಬಳಲಬಾರದು ಎಂಬುದು ಸರಕಾರದ ಉದ್ದೇಶ. ರಾಜ್ಯದಲ್ಲಿ ಸುಮಾರು ನಾಲ್ಕು ಕೋಟಿ ಜನರಿಗೆ ಒಂದು ಕುಟುಂಬಕ್ಕೆ 7 ಕೆ.ಜಿ. ಅಕ್ಕಿಯನ್ನು ಸರಕಾರ ಉಚಿತವಾಗಿ ನೀಡುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾದರೂ ರಾಜ್ಯದ ಜನರು ಗುಳೆಹೋಗಿಲ್ಲ ಎಂದು ಸ್ಮರಿಸಿದರು.

ಶಾಲೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಹೋಗುವ ಪ್ರತೀ ಮಕ್ಕಳಿಗೂ ವಾರದಲ್ಲಿ ಎರಡು ದಿನ 150 ಮಿಲಿಗ್ರಾಂ ಕೆನೆಭರಿತ ಹಾಲು ಹಾಗೂ ಕೊಳಿಮೊಟ್ಟೆ ನೀಡಲಾಗುವುದು ಎಂದ ಅವರು, ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಈ ಯೋಜನೆ ಯಶಸ್ವಿಗೊಳಿಸಲು ಅಂಗನವಾಡಿ ಸಹಾಯಕಿಯರು, ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಸಚಿವೆ ಉಮಾಶ್ರೀ ಮಾತನಾಡಿ, ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.

ಅನುದಾನ ಕಡಿತ: ಐಸಿಡಿಎಸ್ ಯೋಜನೆಗೆ ಕೇಂದ್ರ ಸರಕಾರ ಈ ಮೊದಲು ನೀಡುತ್ತಿದ್ದ ಶೇ.90ರಷ್ಟು ಅನುದಾನವನ್ನು ಕಡಿಮೆ ಮಾಡಿದೆ. ಆದರೂ, ರಾಜ್ಯ ಸರಕಾರ ಶೇ.80ರಷ್ಟು ಹಣವನ್ನು ತಾನೆ ಭರಿಸಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ 302ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ ಎಂದರು.

ಈ ಮೊದಲು ಗರ್ಭಿಣಿ-ಬಾಣಂತಿಯರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ, ಆಹಾರಧಾನ್ಯಗಳು ಸರಿಯಾಗಿ ಗರ್ಭಿಣಿಯರಿಗೆ ದೊರಕುತ್ತಿರಲಿಲ್ಲ. ಇದನ್ನು ತಪ್ಪಿಸಲು ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ ನೇರವಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿ ರಚನೆಗೆ ಶೇ.95ರಷ್ಟು ಅಧಿಕಾರಿಗಳು ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ದೂರಿದರು.

ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಸಂತ್ರಸ್ತರಿಗೆ 50 ಸಾವಿರ ರೂ.ನಿಂದ 4.50 ಲಕ್ಷ ರೂ.ವರೆಗೆ ಪರಿಹಾರ ನೀಡಲು ಅವಕಾಶವಿದೆ. ಆದರೆ, ಕೇಂದ್ರದ 'ನಿರ್ಭಯ ನಿಧಿ'ಯಡಿ ರಾಜ್ಯ ಸರಕಾರ ಒಂದು ನಯಾಪೈಸೆಯನ್ನು ಪಡೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಆನಿಟ್ಟಿನಲ್ಲಿ ಸರಕಾರ ರೂಪಿಸಿರುವ 'ಮಾತೃಪೂರ್ಣ' ಯೋಜನೆ ಅತ್ಯಂತ ಮಹತ್ವದ್ದು. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಉಗ್ರಪ್ಪ ಸಲಹೆ ನೀಡಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯ, ಗರ್ಭಿಣಿ ಸ್ತ್ರೀಯರಿಗೆ ಊಟ ಬಡಿಸಿ ಶುಭ ಹಾರೈಸಿದರು. ಅಲ್ಲದೆ, ಇಲಾಖೆ ವತಿಯಿಂದ ಹೊರತರಲಾದ ಸಮಾಲೋಚನಾ ಪ್ಲಿಪ್‌ಚಾರ್ಟ್ ಅನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರದಲ್ಲಿ ನಗರಾಭಿವೃದ್ದಿ ಸಚಿವ ರೋಷನ್‌ಬೇಗ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ಅಪರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಮಹಿಳಾ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಉಮಾ ಮಹಾದೇವನ್, ನಿರ್ದೇಶಕಿ ದೀಪಾ ಚೋಳನ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಬಾಲಭವನ ಸೊಸೈಟಿ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್, ದಿಲ್ಲಿ ಯೂನಿಸೆಫ್ ಪ್ರತಿನಿಧಿ ರಾಬರ್ಟ್ ಸೇರಿ ಇನ್ನಿತರರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News