×
Ad

ಮೊದಲು ಮನಸ್ಸು ಸ್ವಚ್ಛವಾಗಿಟ್ಟುಕೊಳ್ಳಿ: ಬಿಜೆಪಿ ನಾಯಕರಿಗೆ ಪರಮೇಶ್ವರ್ ತಿರುಗೇಟು

Update: 2017-10-02 19:18 IST

ಬೆಂಗಳೂರು, ಅ.2: ಬಿಜೆಪಿ ಮುಖಂಡರು ‘ಸ್ವಚ್ಛ ಭಾರತ’ದ ಹೆಸರಿನಲ್ಲಿ ಬೀದಿ ಗುಡಿಸುವ ಮೊದಲು ತಮ್ಮ ಮನಸ್ಸುಗಳನ್ನು ಸ್ವಚ್ಛ ಮಾಡಿಕೊಂಡರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಯವರ 148 ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ 113ನೆ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ನಾಯಕರು ಬೀದಿ ಗುಡಿಸಿದರೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಆದರೆ, ಅವರ ಮನಸ್ಸುಗಳನ್ನು ಸ್ವಚ್ಛ ಮಾಡಿಕೊಂಡರೆ ಇಡೀ ಸಮಾಜವು ನೆಮ್ಮದಿಯಿಂದ ಬದುಕುವಂತಾಗುತ್ತದೆ. ಸಮಾಜ ಶಾಂತಿಯುತವಾಗಿರಬೇಕಾದರೆ ಮನಸ್ಸುಗಳು ಶಾಂತವಾಗಿರಬೇಕೆಂದು ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಪ್ರತಿಪಾದಿಸುತ್ತಿದ್ದರು. ಈ ಕೆಲಸವನ್ನು ಬಿಜೆಪಿ ನಾಯಕರು ಮೊದಲು ಮಾಡಬೇಕು ಎಂದು ಆಗ್ರಹಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮರಳಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ಅದನ್ನು ಕಾರ್ಯಗತ ಮಾಡಲು ಪಕ್ಷದ ಎಲ್ಲ ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ಹೋಗಿ ಪಕ್ಷ ಹಾಗೂ ಸರಕಾರದ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ 54 ಸಾವಿರ ಬೂತ್‌ಗಳನ್ನು ಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಬೂತ್‌ಮಟ್ಟದಲ್ಲಿ ಪಕ್ಷದ ಮುಖಂಡರು ತೆರಳಿ, ರಾಜ್ಯ ಸರಕಾರದ ನಾಲ್ಕೂವರೆ ವರ್ಷದ ಸಾಧನೆಗಳನ್ನು ಪರಿಚಯಿಸುವ ಕೆಲಸ ಮಾಡಬೇಕು. ಜನರ ಆಶೀರ್ವಾದವನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಏಕಮಾತ್ರ ಉದ್ದೇಶವಾಗಿರಬೇಕೆ ಹೊರತು, ಯಾರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ, ಯಾರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಗೊಂದಲಗಳಿಗೆ ಯಾರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಪಕ್ಷವು ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಶೋಷಿತರು, ತುಳಿತಕ್ಕೊಳಗಾದವರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸವನ್ನು ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಆದುದರಿಂದಲೆ, ಸರಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಿವಿಗೊಡದೆ, ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗೂಡಿ ಕೆಲಸ ಮಾಡಲಿ ಎಂದು  ಹೇಳಿದರು.

ಬಿಜೆಪಿ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಪ್ರಜಾಪ್ರಭುತ್ವದ ವ್ಯಾಖ್ಯಾನವೆ ಅವರಿಗೆ ಗೊತ್ತಿಲ್ಲ. ಗಾಂಧೀಜಿ ಅಲ್ಪಸಂಖ್ಯಾತರ ಪರವಾಗಿದ್ದರು ಎಂದು ಅವರನ್ನು ಕೊಂದು ಹಾಕಿದರು. ಕಾಂಗ್ರೆಸ್ ಪಕ್ಷವು ದೇಶಕ್ಕೆ ಅನೇಕ ನಾಯಕರನ್ನು, ಉತ್ತಮ ಆಡಳಿತವನ್ನು ನೀಡಿದೆ. ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರಮೋದಿ ಜಾರಿಗೆ ತಂದ ಆರ್ಥಿಕ ನೀತಿಗಳಿಂದಾಗಿ ದೇಶದಲ್ಲಿ ಆರ್ಥಿಕ ದಿವಾಳಿತನ ಎದುರಾಗಿದೆ. ಜನಸಾಮಾನ್ಯರು ಅನಗತ್ಯವಾಗಿ ತೆರಿಗೆ ಪಾವತಿಸುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ. ಮಜ್ಜಿಗೆ ಕುಡಿದರೂ ತೆರಿಗೆ ಕಟ್ಟಬೇಕು. ಇಂತಹ ತೆರಿಗೆ ಪದ್ಧತಿ ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ಎಂದೂ ಕಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಸಂಸದ ಕೆ.ಎಚ್.ಮುನಿಯಪ್ಪ, ಸಚಿವೆ ಉಮಾಶ್ರೀ, ಮೇಯರ್ ಸಂಪತ್‌ರಾಜ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ಪ್ರೊ.ಕೆ.ಇ.ರಾಧಾಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೋಮುವಾದಿ ಶಕ್ತಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ತಲೆ ಎತ್ತುತ್ತಿವೆ. ಇವುಗಳನ್ನು ಮಟ್ಟ ಹಾಕದಿದ್ದರೆ ದೊಟ್ಟಮಟ್ಟದಲ್ಲಿ ಬೆಳೆದು, ಸಮಾಜದ ಶಾಂತಿ, ನೆಮ್ಮದಿ, ಸೌಹಾರ್ದತೆಯನ್ನು ಹಾಳು ಮಾಡುತ್ತವೆ. ಇಂತಹ ಬೆಳವಣಿಗೆಗೆ ಯಾವುದೆ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News