ನಟ ಪ್ರಜ್ವಲ್ ದೇವರಾಜ್ ಸಹೋದರ ಪ್ರಣಾಮ್ ವಿಚಾರಣೆ
ಬೆಂಗಳೂರು, ಅ.2: ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಕಳೆದ ಸೆ.27ರ ಮಧ್ಯರಾತ್ರಿ ಉದ್ಯಮಿ ದಿ.ಆದಿಕೇಶವುಲು ನಾಯ್ಡು ಮೊಮ್ಮಗ ಗೀತಾ ವಿಷ್ಣು ಅಪಘಾತ ನಡೆಸಿದ್ದ ಕಾರಿನಲ್ಲಿ ನಟ ದೇವರಾಜ್ ಕಿರಿಯ ಪುತ್ರ ಪ್ರಣಾಮ್ ದೇವರಾಜ್ ಇರುವುದು ಪತ್ತೆಯಾಗಿದ್ದು, ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಅಪಘಾತದ ಸಮಯದಲ್ಲಿ ಪ್ರಜ್ವಲ್ ಸಹೋದರ ಪ್ರಣಾಮ್‌ನನ್ನು ನೋಡಿ ಗೊಂದಲಕ್ಕೀಡಾದ ಸ್ಥಳೀಯರು ಪ್ರಜ್ವಲ್ ಎಂದು ತಪ್ಪಾಗಿ ಗ್ರಹಿಸಿದ್ದರು. ಪ್ರಣಾಮ್ ದೇವರಾಜ್ ಘಟನೆ ನಡೆದ ದಿನದಂದು ಸ್ಥಳದಲ್ಲೇ ಇದ್ದರು ಎಂಬ ಬಗ್ಗೆ ತಾಂತ್ರಿಕವಾಗಿ ಮಾಹಿತಿ ಕಲೆಹಾಕಿದ ಪೊಲೀಸರು ಪ್ರಣಾಮ್‌ಗೆ ಈಗ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣ ಸಂಬಂಧ ಅಪಘಾತ ನಡೆಸಿದ ಕಾರಿನಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಇದ್ದರು ಎನ್ನುವುದನ್ನು ಇಬ್ಬರೂ ನಟರೂ ನಿರಾಕರಿಸಿ ಸ್ಪಷ್ಟನೆ ನೀಡಿದ್ದರು. ಪೊಲೀಸರಿಂದ ನೋಟಿಸ್ ಬಂದಿದ್ದು ನಿಜ. ಈಗಾಗಲೇ ಠಾಣೆಗೆ ಹೋಗಿ ಮಾಹಿತಿ ನೀಡಿ ಬಂದಿದ್ದಾನೆ ಪ್ರಣಾಮ್ ಎಂದು ನಟ ದೇವರಾಜ್ ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಗೀತಾ ವಿಷ್ಣು ಸಹೋದರ ಆದಿ ನಾರಾಯಣ, ಪ್ರಣಾಮ್ ದೇವರಾಜ್, ಫೈಸಲ್, ಶಶಾಂಕ್ ಸೇರಿ ಒಟ್ಟು 6 ಮಂದಿಗೆ ನೋಟಿಸ್ ಮಾಡಲಾಗಿದೆ. ಪ್ರಜ್ವಲ್ ಹಾಗೂ ದಿಗಂತ್‌ಗೆ ನೋಟಿಸ್ ನೀಡಿಲ್ಲ ಎಂದು ದಕ್ಷಿಣ ಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಅಪಘಾತಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ವಿಷ್ಣು ನನ್ನ ಸ್ನೇಹಿತ ಅಷ್ಟೇ. ಅಪಘಾತ ನಡೆದಾಗ ನಾನು ಅಲ್ಲಿರಲಿಲ್ಲ. ಈ ಪ್ರಕರಣದ ಸಂಬಂಧ ಪೊಲೀಸರು ವಿಚಾರಣೆ ನಡೆಸಿದರೆ ಸಹಕರಿಸುವುದಾಗಿ ನಟ ದಿಗಂತ್ ಸ್ಪಷ್ಟಪಡಿಸಿದ್ದಾರೆ.