×
Ad

ವನ್ಯಜೀವಿಗಳ ಸಂರಕ್ಷಣೆಗೆ ಸರಕಾರ ಬದ್ಧ: ರಮಾನಾಥ ರೈ

Update: 2017-10-02 21:27 IST

ಬೆಂಗಳೂರು, ಅ.2: ರಾಜ್ಯ ಸರಕಾರವು ವನ್ಯಜೀವಿಗಳ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಸೋಮವಾರ 63ನೆ ವನ್ಯಜೀವಿ ಸಪ್ತಾಹದ ಅಂಗವಾಗಿ ನಗರದ ಕಬ್ಬನ್‌ಪಾರ್ಕ್‌ನಿಂದ ಲಾಲ್‌ಬಾಗ್‌ವರೆಗೆ ಹಮ್ಮಿಕೊಂಡಿದ್ದ ವಾಕಥಾನ್ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಅರಣ್ಯ ಪ್ರದೇಶದಲ್ಲಿ ಹುಲಿ, ಜಿಂಕೆ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯ ಜೀವಿಗಳ ಸಂರಕ್ಷಣೆಗೆ ರಾಜ್ಯ ಸರಕಾರವು ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದೆ ಎಂದು ಅವರು ಹೇಳಿದರು.

ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆನೆಗಳ ಹಾವಳಿಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಆಗಿರುವ ಹಾನಿಗೆ ಸೂಕ್ತವಾದ ಪರಿಹಾರವನ್ನು ನೀಡಲಾಗುತ್ತಿದೆ. ಅಲ್ಲದೆ, ಪ್ರಾಣಿಗಳಿಂದ ಜನರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹುಲಿವೇಷದ ತಾಳಕ್ಕೆ ಹೆಜ್ಜೆ ಹಾಕಿದ ಸಚಿವ: ವನ್ಯಜೀವಿ ಸಪ್ತಾಹದ ಅಂಗವಾಗಿ ವಾಕಥಾನ್‌ನಲ್ಲಿ ಹುಲಿವೇಷ ಕುಣಿತವನ್ನು ಆಯೋಜಿಸಲಾಗಿತ್ತು. ಲಾಲ್‌ಬಾಗ್‌ನಲ್ಲಿ ಹುಲಿವೇಷ ಕುಣಿತ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ರಮಾನಾಥ ರೈ, ಕಲಾವಿದರೊಂದಿಗೆ ಹೆಜ್ಜೆ ಹಾಕುವ ಮೂಲಕ ಸ್ಥಳದಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದರು.

ತಮ್ಮ ಕೈಗಳು ಹಾಗೂ ಮುಖವನ್ನು ಹುಲಿಯಂತೆ ಮಾಡಿಕೊಂಡು, ಘರ್ಜನೆ ಮಾಡುವ ಮೂಲಕ ಕೆಲಕಾಲ ಹುಲಿವೇಷ ಕುಣಿತದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅವರೊಂದಿಗಿದ್ದ ಹಿರಿಯ ನಟ ಪ್ರಕಾಶ್ ರೈ ಹಾಗೂ ಪುನೀತ್ ರಾಜ್‌ಕುಮಾರ್, ಸಚಿವ ರಮಾನಾಥ ರೈಗೆ ಹುರಿದುಂಬಿಸಿದರು.

ಈ ವೇಳೆ ಕಬ್ಬನ್‌ಪಾರ್ಕ್‌ನಿಂದ ಲಾಲ್‌ಬಾಗ್‌ವರೆಗೆ ನಡೆದ ವಾಕಥಾನ್‌ನಲ್ಲಿ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಸಂದೇಶಗಳನ್ನು ಸಾರುವ ಭಿತ್ತಿ ಫಲಕಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News