ರಿಯಲ್ ಎಸ್ಟೇಟ್ ಗಾಥೆ: ಖೆಡ್ಡಾ ನಿರ್ಮಿಸಿದ ಬಿಲ್ಡರ್

Update: 2017-10-02 18:39 GMT

‘‘ಬಾ ನೊಣವೇ ಬಾ ನೊಣವೇ ಬಾ ನನ್ನ ಮನೆಗೆ...’’ ತೀರಾ ನಾಜೂಕಿನಲ್ಲಿ ಸುಂದರವಾಗಿ ಹೆಣೆದ ಬಲೆಯಲ್ಲಿ ಕುಳಿತ ಜೇಡ ಹಾಡುವುದು ಹೀಗೆ, ಮಂಗಳೂರಿನ ಓರ್ವ ಬಿಲ್ಡರ್ ಹೆಣೆದ ಬಲೆಯಲ್ಲಿ ಬಿದ್ದ ನತದೃಷ್ಟರೊಬ್ಬರ ಅನುಭವ ದಾಖಲಿಸುವ ವೇಳೆಯಲ್ಲಿ ನೆನಪಾಯಿತು ಈ ಸಾಲು.

‘‘ಮಂಗಳೂರಿನ ರಸ್ತೆಗಳಲ್ಲಿ ಓಡಾಡುವ ಪ್ರತೀ ಹತ್ತು ವಾಹನಗಳಲ್ಲಿ ಎರಡು ಮರ್ಸಿಡಿಸ್, ಆಡಿ, ಜಾಗ್ವಾರ್ ಆಗಿರುತ್ತದೆ. ಈ ದುಬಾರಿ ಕಾರುಗಳಲ್ಲಿ ಓಡಾಡುವವರಲ್ಲಿ ಹೆಚ್ಚಿನವರು ಬಿಲ್ಡರ್ಸ್ ಮತ್ತು ರಿಯಲ್ ಎಸ್ಟೇಟ್ ಮಂದಿ. ಬಿಲ್ಡರ್ ಆದ ಕೂಡಲೇ ಇವರೆಲ್ಲರ ಬಳಿ ಉದ್ದುದ್ದದ ಕಾರುಗಳು ಎಲ್ಲಿಂದ ಬಂದವು ಎಂದು ಯೋಚಿಸಬೇಕಾಗಿಲ್ಲ. ಕೆಲವೇ ಕೆಲವು ಸಜ್ಜನರನ್ನು ಹೊರತುಪಡಿಸಿದರೆ ಉಳಿದವರ ವಹಿವಾಟೇ ಹೀಗೆ, ನಿಮಗೆ ಮಾಡಿದಂತೆ...’’ ವಕೀಲರು ಅವರ ‘ಮನ್ ಕೀ ಬಾತ್’ ಹೇಳುತ್ತಿದ್ದರೆ ನಾನು ಮತ್ತು ಅಜಯ್ ವಿದ್ಯಾರ್ಥಿಗಳಂತೆ ಅವರ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದೆವು.

ಅಜಯ್ ನನ್ನ ಸ್ನೇಹಿತ. ಅಜಯ್‌ರ ಮಾವ ಕೋಸ್ತ ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ. ಅವರ ಮೂಲ ಮನೆ ಬಂಟ್ವಾಳ ಸಮೀಪದ ಒಂದು ಹಳ್ಳಿ. ಮೂಲಮನೆಯಲ್ಲಿ ಕೋಸ್ತರ ಪಾರ್ಶ್ವವಾಯು ಪೀಡಿತ ತಂದೆ ಹಾಗೂ ತಾಯಿ ಇದ್ದಾರೆ. ಇವರಿಬ್ಬರ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆ ಸುಲಭವಾಗಲೆಂದು ಕೋಸ್ತ ಮಂಗಳೂರಿನಲ್ಲೊಂದು ಪ್ಲಾಟ್ ಖರೀದಿಸಲು 2012ರಲ್ಲಿ ನಿರ್ಧರಿಸಿದ್ದರು. ಆಗ ವ್ಯಾಪಾರವೂ ಚೆನ್ನಾಗಿತ್ತು. ಫ್ಲಾಟ್‌ಗಾಗಿ ಅಡ್ವಾನ್ಸ್ ಮಾಡಿದರು. ಒಂದೇ ವರ್ಷದಲ್ಲಿ ಬಿಲ್ಡರ್‌ಗೆ ಮೂವತ್ತೇಳು ಲಕ್ಷ ರೂಪಾಯಿಗಳನ್ನು ಪಾವತಿಸಿದ್ದು ಆಯಿತು. ಫ್ಲಾಟಿನ ರೇಟು ಮೂವತ್ತೇಳು ಲಕ್ಷ ಎಪ್ಪತ್ತೆಂಟು ಸಾವಿರ ಮಾತ್ರ. ಅಂದರೆ ಕೋಸ್ತರ ಬಾಕಿ ಕೇವಲ ಎಪ್ಪತ್ತೆಂಟು ಸಾವಿರ. ಒಟ್ಟು ಪಾವತಿಯಲ್ಲಿ ಹದಿನೈದು ಲಕ್ಷ ಕೋಸ್ತರ ಬ್ಯಾಂಕ್ ಖಾತೆಯಿಂದ ಬಿಲ್ಡರರ ಖಾತೆಗೆ ನೇರವಾಗಿ ವರ್ಗಾವಣೆಯಾಗಿತ್ತು. ಉಳಿದ ಮೊತ್ತ ಬಿಲ್ಡರ್ ಕಚೇರಿಯಲ್ಲಿ ಪಾವತಿಸಿದ್ದು ಈ ನಗದು ಪಾವತಿಗೆ ಸೂಕ್ತ ರಶೀದಿಯನ್ನು ಕೋಸ್ತ ಪಡೆದುಕೊಂಡಿದ್ದು ಜಾಗ್ರತೆಯಲ್ಲಿ ತೆಗೆದು ಉಳಿಸಿಕೊಂಡಿದ್ದರು.

ಇಷ್ಟೆಲ್ಲ ನಡೆದು ಇದೀಗ ಮೂರ್ನಾಲ್ಕು ವರ್ಷಗಳೇ ಸಂದಿವೆ. ಫ್ಲಾಟ್ ನಿರ್ಮಾಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಕೆಲವು ಫ್ಲಾಟ್‌ಗಳ ಗೃಹಪ್ರವೇಶವೂ ಆಗಿದೆ. ಆದರೆ ಬಿಲ್ಡರ್ ತನ್ನ ಗ್ರಾಹಕ ಕೋಸ್ತರಿಗೆ ಅವರ ಫ್ಲಾಟ್‌ನ್ನು ರಿಜಿಸ್ಟರ್ ಮಾಡಿ ನೀಡಿಲ್ಲ. ವಿಚಾರಿಸಿದರೆ ಬಿಲ್ಡರ್ ನೀಡುವ ಉತ್ತರವು ಎಂತಹ ಗಂಡೆದೆಯವರನ್ನೂ ಬೆಚ್ಚಿ ಬೀಳಿಸುವ ಹಾಗಿದೆ: ‘‘ಫ್ಲಾಟಿಗೆ ನೀವು ಪಾವತಿಸಿರುವುದು ಹದಿನೈದು ಲಕ್ಷ ಮಾತ್ರ. (ಆರ್‌ಟಿಜಿಎಸ್) ಉಳಿದ ಬಾಕಿ ಪಾವತಿಸಿದರೆ ಫ್ಲಾಟ್ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಕೊಡುತ್ತೇವೆ!’’ ನಗದು ಪಾವತಿಯ ರಸೀದಿಗಳನ್ನು ತೋರಿಸಿದರೆ ‘‘ನೀವು ತೋರಿಸುತ್ತಿರುವ ರಶೀದಿಗಳು ನಮ್ಮ ಸಂಸ್ಥೆಯವೇ. ನಾವೇ ನೀಡಿರುವ ರಶೀದಿಗಳವು. ಆದರೆ ಆ ಟೈಮಿನಲ್ಲಿ ನಮ್ಮ ಸಂಸ್ಥೆಯಲ್ಲಿ ಇನ್ನೊಬ್ಬರು ಪಾಲುದಾರರು ಇದ್ದರು. ಈಗ ಅವರು ನಮ್ಮ ಸಂಸ್ಥೆಯಲ್ಲಿ ಇಲ್ಲ, ನೀವು ನಿಮ್ಮ ಫ್ಲಾಟ್ ಬೇಕಾದರೆ ಅವರನ್ನು ವಿಚಾರಿಸಬೇಕು...’’ ಎಂದು ಉತ್ತರಿಸುತ್ತಾರೆ.

ಇವರ ಮಾತುಗಳನ್ನು ಕೇಳಿದ ನಂತರ ಆ ನಿವೃತ್ತ ಪಾಲುದಾರರನ್ನು ಹುಡುಕಿಕೊಂಡು ಹೊರಟ ನಮಗೆ ಅವರು ಸಿಕ್ಕಿದ್ದು ಅವರ ಬಿಜೈ ನ್ಯೂ ರೋಡಿನಲ್ಲಿರುವ ಬಂಗಲೆಯಲ್ಲಿ! ಅವರೂ ಅಷ್ಟೇ ಗ್ರಾಹಕರ ಜತೆ ಉಡಾಫೆ ಮಾತನಾಡುವುದೇ ಇಲ್ಲ. ‘‘... ನೀವು ಖರೀದಿಸಿರುವ ಫ್ಲಾಟಿನ ಪೇಮೆಂಟು ಪೂರ್ತಿ ಬಂದಿದೆ ಎಂದು ನಾನು ಕೋರ್ಟಿನಲ್ಲಿ ಬೇಕಾದರೂ, ದೂಪದಕಟ್ಟೆಯಲ್ಲಿ ಬೇಕಾದರೂ ಹೇಳುತ್ತೇನೆ, ಆದರೆ ನಾನೀಗ ನಿವೃತ್ತ. ನಾನು ಹೆಲ್ಪ್‌ಲೆಸ್. ಅವರು ನಿಮಗೆ ರಿಜಿಸ್ಟರ್ ಮಾಡಿಕೊಡಬೇಕು. ಸಂಸ್ಥೆಯಲ್ಲಿ ಈಗ ಅವರೇ ಗಂಡ ಹೆಂಡತಿ ಪಾಲುದಾರರು. ಅವರು ನನಗೂ ಮೋಸ ಮಾಡಿದ್ದಾರೆ. ಸಾಯುವಾಗ ಅವರಿಗೆ ಹುಳ ಬೀಳಲಿಕ್ಕೆ ಉಂಟು ...’’ ಎಂದು ನಿವೃತ್ತ ಪಾಲುದಾರ ತಮ್ಮ ದುಃಖವನ್ನು ಗಿರಾಕಿಗಳೆದುರೇ ಬಿಚ್ಚಿಡುತ್ತಾರೆ. ಇದೀಗ ತಾನು ತನ್ನ ಹೆಂಡತಿಯ ಹೆಸರಿನಲ್ಲಿ ಹೊಸ ರಿಯಲ್ ಎಸ್ಟೇಟ್ ಸಂಸ್ಥೆ ಹುಟ್ಟುಹಾಕಿದ್ದು ಹೊಸ ಫ್ಲಾಟ್ ನಿರ್ಮಾಣ ಆರಂಭಿಸಿದ್ದೇನೆ ನಿಮ್ಮ ಖರೀದಿ ಇದ್ದರೆ ನನ್ನಲ್ಲಿಗೆ ಬನ್ನಿ...ಆಹ್ವಾನ ನೀಡಲು ಅವರು ಮರೆಯುವುದಿಲ್ಲ.

ವಿಶೇಷ ಎಂದರೆ ಮೊಸ ಹೋಗಿರುವ ಗ್ರಾಹಕ ಹಾಗೂ ಮೋಸ ಮಾಡಿರುವ ಬಿಲ್ಡರ್‌ದ್ವಯರು ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು. ಆದರೆ ಆಗಿರುವ ವಂಚನೆಗೆ ಪರಿಹಾರ ಸಿಗುವುದಿಲ್ಲ!

ಕೋಸ್ತಾ ಮಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ದೂರನ್ನು ಸ್ವೀಕರಿಸಿದರು. ನಿಮ್ಮ ದೂರು ಸಿವಿಲ್ ಸ್ವರೂಪದ್ದು ಹಾಗಾಗಿ ನ್ಯಾಯಾಲಯವನ್ನು ಸಂಪರ್ಕಿಸಿ ಎಂದು ತಮ್ಮ ವ್ಯಾಪ್ತಿಯ ಮಿತಿ ತೋರಿಸಿದರು.

ಗ್ರಾಹಕ ನೀಡಿರುವ ಲಾಯರ್ ನೋಟೀಸಿಗೆ ಬಿಲ್ಡರ್‌ನ ಲಾಯರ್‌ಉತ್ತರಿಸುತ್ತ ನನ್ನ ಕಕ್ಷಿದಾರನನ್ನು ಅವಮಾನಿಸುತ್ತಿರುವುದರ ವಿರುದ್ಧ ನಿಮ್ಮ ಮೇಲೆ ಏಕೆ ದಾವೆಯನ್ನು ಹೂಡಬಾರದು? ಎಂದು ಬೆದರಿಸುತ್ತಾರೆ. ಇಷ್ಟೆಲ್ಲ ಅನುಭವಿಸಿದ ಕೋಸ್ತ ದಂಪತಿಗೆ ಇತ್ತೀಚೆಗಷ್ಟೇ ಬ್ಲಡ್‌ಪ್ರೆಶರ್, ಶುಗರ್ ಆರಂಭವಾಗಿದೆ. ಮುಂಬೈಯಿಂದ ಊರಿಗೆ ಮೊದಲಿನಂತೆ ಓಡಾಡಲು ಸಾಧ್ಯವಾಗದೇ ಸಂಬಂಧಿ ಅಜಯ್‌ಗೆ ಜಿ.ಪಿ.ಎ. ನೀಡಿ ಕೋರ್ಟು ಮೆಟ್ಟಿಲು ಹತ್ತಿಸಿಬಿಟ್ಟಿದ್ದಾರೆ.
ಅಜಯ್ ಮತ್ತು ನಾನು ಓಡಾಟ ಆರಂಭಿಸಿದ್ದೇವೆ. ಮೊದಲ ಪ್ರಯತ್ನವಾಗಿ ಮಂಗಳೂರಿನಲ್ಲೇ ಇರುವ ಕ್ರೆಡೈ (ಸಿಆರ್‌ಇಡಿಎಐ) ಅಧ್ಯಕ್ಷ ಮೆಹ್ತಾರನ್ನು ಭೇಟಿಯಾದೆವು. ‘‘ನೀವು ಹೇಳುತ್ತಿರುವ ಬಿಲ್ಡರ್ ಕ್ರೆಡೈ ಸದಸ್ಯ ಅಲ್ಲ, ಹೀಗಾಗಿ ನಿಮ್ಮ ಪ್ರಕರಣದಲ್ಲಿ ಕ್ರೆಡೈ ಮದ್ಯಪ್ರವೇಶ ಮಾಡುವಂತಿಲ್ಲ’’ ಎಂದುತ್ತರಿಸಿದರು ಮೆಹ್ತಾಜೀ.
ನಮ್ಮ ಬತ್ತಳಿಕೆಯಲ್ಲಿ ಇನ್ನೂ ಅಸ್ತ್ರಗಳಿವೆ ಎನ್ನುವುದು ನಮ್ಮ ಲೆಕ್ಕಚಾರ, ಅವುಗಳಲ್ಲೊಂದು: ರೇರಾ (ಆರ್‌ಇಆರ್‌ಎ). ರೇರಾ ಸಂಬಂಧಿತ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದೆವು.

‘‘ಇದು ರೇರಾ ಕಾಯ್ದೆ ಬರುವ ಮೊದಲು ಕಂಪ್ಲೀಟ್ ಆಗಿರುವ ಪ್ರಾಜೆಕ್ಟ್. ಕಂಪ್ಲೀಶನ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಾಜೆಕ್ಟ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ...’’ ಎಂದರವರು. ಮುಂದಿನ ಹೆಜ್ಜೆಯಾಗಿ ವಕೀಲರನ್ನು ಭೇಟಿಯಾಗಿ ಸರಕಾರ ನಿಯೋಜಿಸಿರುವ ಗ್ರಾಹಕ ದೂರು ಪರಿಹಾರ ವೇದಿಕೆಯಲ್ಲಿ ದಾವೆ ಹೂಡಲು ನಾನು ಮತ್ತು ಅಜಯ್ ನಿರ್ಧರಿಸಿದವು. ‘‘ಫ್ಲಾಟಿಗೆ ನೀವು ಮಾಡಿರುವ ಪೇಮೆಂಟು ದೊಡ್ಡದಿರುವುದರಿಂದ ದಾವೆಯನ್ನು ರಾಜ್ಯ ವೇದಿಕೆಯಲ್ಲಿ ದಾಖಲಿಸಬೇಕಾಗುತ್ತದೆ’’ ಎಂದರು ವಕೀಲರು. ಅವರು ಹೇಳಿದ್ದನ್ನೆಲ್ಲ ತಾಳ್ಮೆಯಲ್ಲಿ ಕೇಳಿಸಿಕೊಂಡೆವು ನಾವು.

ವಕೀಲರ ಈ ಮಾತುಗಳನ್ನು ಕೇಳುತ್ತ್ತಾ ನನ್ನ ತಲೆಯಲ್ಲೂ ಅನೇಕ ಅನಿಷ್ಟ ಆಲೋಚನೆಗಳು ಬಂದು ಹೋದವು. ಗ್ರಾಹಕ ಕೋಸ್ತರಿಗೆ ಬಡ್ಡಿ ಸಹಿತ ಹಣವನ್ನು ಮರುಪಾವತಿಸುವಂತೆ ವೇದಿಕೆ ಆದೇಶಿಸಬಹುದು. ಇಂತಹ ಆದೇಶ ಸ್ವೀಕರಿಸಿದ ಬಿಲ್ಡರ್ ‘‘ಇದನ್ನು ಲ್ಯಾಮಿನೇಶನ್ ಮಾಡಿ ನಿಮ್ಮ ಮನೆಯ ಗೋಡೆಗೆ ಅಂಟಿಸಿ, ನಾನು ಪೇಮೆಂಟು ಮಾಡುವುದಿಲ್ಲ..’’ ಎಂದರೆ? ಅಥವಾ ‘‘ನಾನು ಅಫೀಲು ಹೋಗ್ತೇನೆ’’ ಅಂದುಬಿಟ್ಟರೆ? ಒಂದು ವೇಳೆ ‘‘ಗ್ರಾಹಕನ ಪಾವತಿಯು ಸರಿಯಾಗಿದೆ. ಮುಂದಿನ ವಿಳಂಬವಿಲ್ಲದೇ ಫ್ಲಾಟ್‌ನ್ನು ರಿಜಿಸ್ಟರ್ ಮಾಡಿಕೊಡು’’ ಎಂದು ವೇದಿಕೆ ಆದೇಶಿಸಿ ಈ ಆದೇಶದಂತೆ ದುಷ್ಟ ಬಿಲ್ಡರ್ ರಿಜಿಸ್ಟರ್ ಮಾಡಿಕೊಟ್ಟು ವಾಸ್ತವ್ಯ ಹೂಡಿದ ಹಿರಿಯರಿಗೆ ಕಿರುಕುಳ ನೀಡಿದರೆ? ಇದ್ದಕ್ಕಿದ್ದಂತೆ ಕರೆಂಟು, ನೀರನ್ನು ಹೇಳದೆ ಕೇಳದೆ ಅಕಾರಣ ಕಿತ್ತುಬಿಟ್ಟರೆ? ರೌಡಿಗಳನ್ನು ಛೂ ಬಿಟ್ಟರೆ? ಆಗೆಲ್ಲ ನಿತ್ಯವೂ ಪೊಲೀಸ್ ಸ್ಟೇಷನ್‌ಗೆ ಹೋಗಿ ಕೂರುವುದು ಯಾರು? ಎಂಬಂತಹ ನಿಷ್ಪ್ರಯೋಜಕ ಆಲೋಚನೆಗಳು ಬಂದುಹೋದವು.

ರಿಯಲ್ ಎಸ್ಟೇಟ್ ಅಂದರೆ ಇದುವೇನಾ? ಮನುಷ್ಯ ತನ್ನ ಸಂಪಾದನೆಗಾಗಿ ತನ್ನನ್ನೇ ನಂಬಿದವರನ್ನು ಈ ಮಟ್ಟಿಗೆ ಸುಲಿಗೆ ಮಾಡುವಾಗ ಏನೂ ಅನಿಸುವುದೇ ಇಲ್ಲವೇ? ಇಂತಹ ಬಿಲ್ಡರ್‌ಗಳಿಂದ ಬಚಾವಾಗಲು ಗ್ರಾಹಕರಾಗಿ ನಾವು ಎಂತಹ ಮುಂಜಾಗರೂಕತೆ ವಹಿಸಬೇಕು? ದುರ್ಬಲ ಕಾನೂನುಗಳು ನಮ್ಮನ್ನು ರಕ್ಷಿಸದೆ ಹೋದಾಗ ನಾವು ಯಾರನ್ನು ಆಶ್ರಯಿಸಬೇಕು?

ಫ್ಲಾಟ್ ಖರೀದಿಸುವವರು ಈ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಅಡ್ವಾನ್ಸ್ ಪಾವತಿಸುವ ಮುನ್ನ ಪಡೆದುಕೊಂಡಿರಬೇಕು.
ಲಾ ಕಾಲೇಜಿನ ಪಠ್ಯವೊಂದರ ಸಾಲುಗಳು ಹೀಗಿವೆ: ‘ಕಾವೆಟ್ ಎಮ್ಟೆರ್’ , ಲ್ಯಾಟಿನ್ ಭಾಷೆಯ ಈ ಸಾಲಿನ ಅರ್ಥ ‘ಲೆಟ್ ದಿ ಬೈಯರ್ ಬಿವೇರ್’ ಅರ್ಥಾತ್: ‘ನಮ್ಮ ತಲೆ ಮೇಲೆ ನಮ್ಮದೇ ಕೈ’

Writer - ರಾಜೇಂದ್ರ ಪೈ, ಮೂಡುಬಿದಿರೆ

contributor

Editor - ರಾಜೇಂದ್ರ ಪೈ, ಮೂಡುಬಿದಿರೆ

contributor

Similar News