ಪ್ರಥಮ ಟೆಸ್ಟ್: ದಕ್ಷಿಣ ಆಫ್ರಿಕಕ್ಕೆ ಸುಲಭ ತುತ್ತಾದ ಬಾಂಗ್ಲಾದೇಶ

Update: 2017-10-02 18:40 GMT

ಜೋಹಾನ್ಸ್‌ಬರ್ಗ್, ಅ.2: ಕಾಗಿಸೊ ರಬಾಡ ಹಾಗೂ ಕೇಶವ್ ಮಹಾರಾಜ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 333 ರನ್‌ಗಳ ಅಂತರದಿಂದ ಸೋತಿದೆ. ಗೆಲುವಿಗೆ 424 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ಐದನೆ ಹಾಗೂ ಅಂತಿಮ ದಿನದಾಟವಾದ ಸೋಮವಾರ 3 ವಿಕೆಟ್‌ಗಳ ನಷ್ಟಕ್ಕೆ 49 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. 90 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಹಾರಾಜ್ 25 ರನ್‌ಗೆ 4 ವಿಕೆಟ್ ಕಬಳಿಸಿದರೆ, ರಬಾಡ 33 ರನ್‌ಗೆ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಕೊಡುಗೆ ನೀಡಿದರು. ದಕ್ಷಿಣ ಆಫ್ರಿಕ ಎದುರಾಳಿ ಬಾಂಗ್ಲಾಕ್ಕೆ 41 ರನ್ ನೀಡಿ ಕೊನೆಯ 7 ವಿಕೆಟ್‌ಗಳನ್ನು ಕಬಳಿಸಿತು.

ರಬಾಡ ಕ್ಷಿಪ್ರವಾಗಿ 3 ವಿಕೆಟ್‌ಗಳನ್ನು ಉಡಾಯಿಸಿದರು. ಮೊದಲಿಗೆ ನಾಯಕ ಮುಶ್ಫಿಕುರ್ರಹೀಂ(16) ವಿಕೆಟ್ ಪಡೆದರು. ಮಹ್ಮೂದುಲ್ಲಾ (9)ಹಾಗೂ ಲಿಟನ್ ದಾಸ್ ವಿಕೆಟ್ ಪಡೆದ ರಬಾಡ ಬಾಂಗ್ಲಾದೇಶದ ಕ್ಷಿಪ್ರ ಕುಸಿತಕ್ಕೆ ಕಾರಣರಾದರು. ಮಹಾರಾಜ್ ಇನ್ನೆರಡು ವಿಕೆಟ್ ಕಬಳಿಸಿದರು. ಆಟ ಆರಂಭವಾಗಿ 1 ಗಂಟೆ ಕಳೆಯುವಷ್ಟರಲ್ಲಿ ಬಾಂಗ್ಲಾ 78 ರನ್‌ಗೆ 8 ವಿಕೆಟ್ ಕಳೆದುಕೊಂಡಿತು.

 ಶಫಿವುಲ್ ಇಸ್ಲಾಮ್ ಮೂರನೆ ರನ್ ಕದಿಯುವ ಯತ್ನದಲ್ಲಿದ್ದಾಗ ರನೌಟಾದರು. ಮುಸ್ತಫಿಝುರ್ರಹ್ಮಾನ್ ವಿಕೆಟ್ ಪಡೆದ ಮಹಾರಾಜ್ ಬಾಂಗ್ಲಾದೇಶದ 2ನೆ ಇನಿಂಗ್ಸ್‌ಗೆ ತೆರೆ ಎಳೆದರು. ಮೆಹದಿ ಹಸನ್ ಅಜೇಯ 15 ರನ್ ಗಳಿಸಿದರು.

ದಕ್ಷಿಣ ಆಫ್ರಿಕ ಮೊದಲ ಹಾಗೂ 2ನೆ ಇನಿಂಗ್ಸ್ ನಲ್ಲಿ ಕ್ರಮವಾಗಿ 3 ವಿಕೆಟ್‌ಗೆ 493 ರನ್ ಹಾಗೂ 6 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 320 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News