×
Ad

ಆಧಾರ್ ಸಂಖ್ಯೆ ಆಧರಿಸಿ ಆರೋಗ್ಯ ಸೇವೆ ಒದಗಿಸಿ: ಜಗದೀಶ್ ಶೆಟ್ಟರ್

Update: 2017-10-03 19:04 IST

ಬೆಂಗಳೂರು, ಅ. 3: ‘ಯೂನಿರ್ವಸಲ್ ಹೆಲ್ತ್‌ಕಾರ್ಡ್’ ಹೆಸರಿನಲ್ಲಿ ಆರೋಗ್ಯ ಇಲಾಖೆ ಹಣ ಮಾಡುವ ದಂಧೆಯನ್ನು ಕೈಬಿಟ್ಟು, ಆಧಾರ್ ಸಂಖ್ಯೆ ಆಧರಿಸಿ ಎಲ್ಲ ವರ್ಗದ ಜನರಿಗೂ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಲ್ತ್‌ಕಾರ್ಡ್ ಹೆಸರಿನಲ್ಲಿ 500ಕೋಟಿ ರೂ.ಮೊತ್ತದ ಯೋಜನೆಗೆ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದ್ದು, ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಆರೋಪಿಸಿದರು.

ಆರೋಪದಲ್ಲಿ ಹುರುಳಿಲ್ಲ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ 3 ವರ್ಷಗಳಲ್ಲಿ ರಾಜ್ಯಕ್ಕೆ 1.29ಕೋಟಿ ರೂ.ಅನುದಾನ ನೀಡಿದೆ. ಆದರೂ, ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂಬ ಸಿದ್ದರಾಮಯ್ಯರವರ ಆರೋಪದಲ್ಲಿ ಹುರುಳಿಲ್ಲ. ಮುಖ್ಯಮಂತ್ರಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರು.

ಮೆಟ್ರೋ ರೈಲ್ವೆ ಯೋಜನೆಗೆ 3,694 ಕೋಟಿ ರೂ., ಹಾಗೂ ರೈಲ್ವೆ ಯೋಜನೆಗಳಿಗೆ 9989 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಿದೆ. ಆದರೂ, ಸಿಎಂ ಎಲ್ಲ ಕಡೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುತ್ತಾರೆ. ಇದೀಗ ಪ್ರಧಾನಿಯವರ ಮನ್ ಕಿ ಬಾತ್ ನಕಲು ಮಾಡಿ ಕಾಮ್ ಕಿ ಬಾತ್ ವೀಡಿಯೊ ಸಂವಾದಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾಲ್ಕು ವರ್ಷಗಳಲ್ಲಿ 3.34ಲಕ್ಷ ಕೋಟಿ ರೂ.ಹೂಡಿಕೆಯಾಗಿದೆ ಎಂಬ ಸಚಿವ ದೇಶಪಾಂಡೆ ಅವರ ಹೇಳಿಕೆ ಅಪ್ಪಟ ಸುಳ್ಳು. 4 ವರ್ಷಗಳಲ್ಲಿ ಹೂಡಿಕೆಯಾಗಿರುವುದು 2.41ಲಕ್ಷ ಕೋಟಿ ರೂ. ಮಾತ್ರ. 980 ಯೋಜನೆಗಳಿಗೆ ಸರಕಾರ ಅನುಮೋದನೆ ನೀಡಿದ್ದರೂ, ಕೇವಲ 125ಯೋಜನೆಗಳಷ್ಟೇ ಅನುಷ್ಠಾನಗೊಂಡಿದೆ. ಅಲ್ಲದೆ, ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗವೂ ಸಿಕ್ಕಿಲ್ಲ ಎಂದು ದೂರಿದರು.

ದಲಿತರು, ರೈತರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ರಾಜ್ಯ ಸರಕಾರ ಯಾವುದೇ ಕೆಲಸ ಮಾಡಿಲ್ಲ. ಆದರೂ, ಜಾಹೀರಾತಿಗಾಗಿ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಜಾಹೀರಾತಿನಲ್ಲಿನ ಅಂಶಗಳಿಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News