ಕೇಂದ್ರ ಸರಕಾರ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು: ವಿ.ಎಸ್.ಉಗ್ರಪ್ಪ
ಬೆಂಗಳೂರು, ಅ. 3: ಪರಿಶಿಷ್ಟ ವರ್ಗ(ಎಸ್ಟಿ)ದ ಜನಸಂಖ್ಯೆಯನ್ನು ಆಧರಿಸಿ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸಲು ಮೀಸಲಾತಿ ಕಲ್ಪಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ವರ್ಗದ ಜನಸಂಖ್ಯೆ ಶೇ.7.5ರಷ್ಟಿದ್ದು, ಅವರಿಗೆ ಶೇ.3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದುದರಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಅನುದಾನ ಸದ್ಬಳಕೆ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ಮಹರ್ಷಿ ವಾಲ್ಮೀಕಿ ಮೂಲ ರಾಮಾಯಣದ ಪ್ರತಿಯನ್ನು ಎಲ್ಲ ಶಾಲಾ-ಕಾಲೇಜು, ಗ್ರಂಥಾಲಯಗಳಿಗೆ ಒದಗಿಸಬೇಕು. ವಿಶ್ವ ವಿದ್ಯಾನಿಲಯವೊಂದಕ್ಕೆ ವಾಲ್ಮೀಕಿ ಹೆಸರಿಡಬೇಕೆಂದು ಮನವಿ ಮಾಡಿದರು.
ವಾಲ್ಮೀಕಿ ಪುತ್ಥಳಿ ಅ.5ಕ್ಕೆ ಲೋಕಾರ್ಪಣೆ: ವಿಧಾನಸೌಧದ ಪಶ್ಚಿಮದ್ವಾರದ ಬಲಭಾಗದಲ್ಲಿನ ರಾಕ್ ಗಾರ್ಡನ್‌ನಲ್ಲಿ ಸ್ಥಾಪಿಸಿರುವ ಮಹರ್ಷಿ ವಾಲ್ಮೀಕಿ ಅವರ 12ಅಡಿ ಎತ್ತರದ ಪುತ್ಥಳಿಯನ್ನು ಅ.5ರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
2.5ಎಕರೆ ಪ್ರದೇಶದಲ್ಲಿ ವಾಲ್ಮೀಕಿ ತಪೋವನ ನಿರ್ಮಿಸಿದ್ದು, ವಾಲ್ಮೀಕಿ ವಂಶಸ್ಥರು ದೇಣಿಗೆ ರೂಪದಲ್ಲಿ ನೀಡಿದ್ದ 1ಕೋಟಿ ರೂ.ಗಳಷ್ಟು ದೇಣಿಗೆ ನೀಡಿದ್ದಾರೆ. ಪುತ್ಥಳಿಗೆ ಪೀಠ ಸ್ಥಾಪನೆ ಹಾಗೂ ಉದ್ಯಾನವನ ನಿರ್ಮಾಣಕ್ಕೆ ರಾಜ್ಯ ಸರಕಾರ ಅನುದಾನ ನೀಡಿದೆ ಎಂದರು.
ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1ಲಕ್ಷಕ್ಕೂ ಅಧಿಕ ಮಂದಿ ವಿಧಾನಸೌಧಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ 50 ಸಾವಿರ ಜನರಿಗೆ ಉಪಾಹಾರ-ಊಟ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ವಾಹನಗಳಿಗೆ ಅರಮನೆ ಮೈದಾನ, ಸೆಂಟ್ರಲ್ ಕಾಲೇಜ್ ಕ್ರಿಕೆಟ್ ಮೈದಾನದಲ್ಲಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಈ ವೇಳೆ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ನರಸಿಂಹಯ್ಯ, ಸಂಸದ ಬಿ.ವಿ.ನಾಯಕ್ ಉಪಸ್ಥಿತರಿದ್ದರು.