×
Ad

ಗೋವಾ ಕನ್ನಡಿಗರಿಗೆ ಪುನರ್ವಸತಿ ಸೌಲಭ್ಯ: ರಾಜ್ಯ ಸರಕಾರದಿಂದ ಆರ್ಥಿಕ ನೆರವು

Update: 2017-10-03 19:28 IST

ಬೆಂಗಳೂರು, ಅ.3: ಗೋವಾ ರಾಜ್ಯದ ಬೈನಾ ಬೀಚ್ ಸೇರಿದಂತೆ ಇನ್ನಿತರೆಡೆ ಅಲ್ಲಿನ ಸರಕಾರದ ದೌರ್ಜನ್ಯಕ್ಕೆ ಒಳಗಾಗಿ ಮನೆಗಳನ್ನು ಕಳೆದುಕೊಂಡಿರುವ ಕನ್ನಡಿಗರಿಗೆ ಪುನರ್‌ ವಸತಿ ಕಲ್ಪಿಸಲು ರಾಜ್ಯ ಸರಕಾರದಿಂದ ಆರ್ಥಿಕ ನೆರವು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್‌ಚಿಂಚನಸೂರ್ ಗೋವಾಗೆ ತೆರಳಿ ಅಲ್ಲಿನ ಕನ್ನಡಿಗರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ವರದಿ ನೀಡಿದ್ದಾರೆ ಎಂದರು.

ಗೋವಾ ಸರಕಾರ ಭೂಮಿ ನೀಡಿದರೆ ಸಂತ್ರಸ್ತ ಕನ್ನಡಿಗರಿಗೆ ಪುನರ್‌ವಸತಿ ಸೌಲಭ್ಯ ಕಲ್ಪಿಸಲು ಆರ್ಥಿಕ ಸಹಕಾರ ನೀಡಲು ನಮ್ಮ ಸರಕಾರ ಸಿದ್ಧವಿದೆ. ಈ ಬಗ್ಗೆ ಶೀಘ್ರವೇ ಸಚಿವರ ನಿಯೋಗವನ್ನು ಗೋವಾಗೆ ಕಳುಹಿಸಿಕೊಡಲಾಗುವುದು ಎಂದರು.

ಗೋವಾದಲ್ಲಿ ನೂರಾರು ಕನ್ನಡಿಗರ ಮನೆಗಳನ್ನು ನೆಲಸಮಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್‌ಗೆ ವಾಸ್ತವ ಸ್ಥಿತಿ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ, ಗೋವಾಗೆ ಹೋಗಿ ಮಾಹಿತಿ ಕಲೆ ಹಾಕಿ ಇಂದು ಮುಖ್ಯಮಂತ್ರಿಗೆ ಅವರು ವರದಿಯನ್ನು ಸಲ್ಲಿಸಿದರು.

ಬಡವರನ್ನು ಒಕ್ಕಲೆಬ್ಬಿಸಲಾಗಿದ್ದು, ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ರಾಜ್ಯ ಸರಕಾರವು ಗೋವಾ ಸರಕಾರದೊಂದಿಗೆ ಮಾತುಕತೆ ನಡೆಸಿ ಕನ್ನಡಿಗೆ ರಕ್ಷಣೆ ನೀಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಚಿಂಚನಸೂರ್ ತಮ್ಮ ವರದಿಯಲ್ಲಿ ಸಲಹೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News