×
Ad

ಪ್ರಕಾಶ್ ರೈ ಅವಹೇಳನ ಖಂಡಿಸಿ ಸಾಹಿತಿ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Update: 2017-10-03 21:11 IST

ಬೆಂಗಳೂರು, ಅ.3: ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿ ಹಾಗೂ ಪ್ರಧಾನಿ ಮೋದಿ ಮೌನವನ್ನು ಪ್ರಶ್ನಿಸಿದ ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಅವರ ವಿರುದ್ಧ ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ಅಶ್ಲೀಲವಾಗಿ ಮಾತನಾಡುತ್ತಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಲೇಖಕರು, ಚಿಂತಕರು ಇಂದಿಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿ, ಸಂಘಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಚಿಂತಕ ಜಿ.ಎನ್.ನಾಗರಾಜ್, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕಿದೆ. ಅದೇ ರೀತಿಯಲ್ಲಿ ಪ್ರಕಾಶ್‌ರೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯನ್ನು ಸಾರ್ವಜನಿಕರು ಪ್ರಶ್ನಿಸಬಾರದು ಅಂತ ಎಲ್ಲಿಯೂ ಹೇಳಿಲ್ಲ. ಆದರೆ ಸಂಘಪರಿವಾರ, ಬಿಜೆಪಿ ಪ್ರಶ್ನೆ ಎತ್ತುವ ಧ್ವನಿಯನ್ನು ಅಡಗಿಸುವ ಕುತಂತ್ರ ಮಾಡುತ್ತಿದೆ. ಅಲ್ಲದೆ, ಪ್ರಶ್ನಿಸುವವರ ವೈಯಕ್ತಿಕ ಜೀವನ ಕುರಿತು ತೇಜೋವಧೆ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.

ಸಮಾಜದಲ್ಲಿ ಪ್ರಶ್ನಿಸುವವರನ್ನು, ಸತ್ಯವನ್ನು ಮಾತನಾಡುವವರನ್ನು ಹತ್ಯೆ ಮಾಡುವ ಮೂಲಕ ಸತ್ಯ ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಮೋದಿ ಹಾಗೂ ಯೋಗಿ ಆದಿತ್ಯಾನಂದರನ್ನು ಪ್ರಶ್ನಿಸಿದ ಪ್ರಕಾಶ್ ರೈ ಅವರನ್ನು ಬೀದಿಯಲ್ಲಿಯೇ ನಿನಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕುತ್ತಿರುವುದು ಪ್ಯಾಶಿಸ್ಟ್ ವ್ಯವಸ್ಥೆ ನಿರ್ಮಿಸುವ ಹುನ್ನಾರವಾಗಿದೆ ಎಂದು ತಿಳಿಸಿದರು.

ಚರಂಡಿ ರಾಜಕೀಯ ಸಲ್ಲ: ಪ್ರಕಾಶ್ ರೈ ಎತ್ತಿರುವ ಸಾಮಾಜಿಕ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಅವರ ವೈಯಕ್ತಿಕ, ಕೌಟುಂಬಿಕ ವಿಷಯಗಳನ್ನು ಎಳೆತರುತ್ತಿದ್ದಾರೆ. ಕರ್ನಾಟಕದ ಸಂಸದನಾಗಿ, ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡದ ಪ್ರತಾಪಸಿಂಹ, ಪ್ರಕಾಶ್ ರೈ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ ಚರಂಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ವಿಚಾರವಾದಿಗಳ ಹತ್ಯೆ ಹಾಗೂ ಸತ್ಯ ಹೇಳುವವರ ಬಾಯಿ ಮುಚ್ಚಿಸುವ ವ್ಯವಸ್ಥಿತವಾದ ಹುನ್ನಾರ ಮಾಡಲಾಗುತ್ತಿದೆ. ಸತತವಾಗಿ ಕೇಂದ್ರದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ದಕ್ಷಿಣ ಭಾರತದಲ್ಲಿ ಅಧಿಕಾರ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ಶತ ಪ್ರಯತ್ನ ನಡೆಸುತ್ತಿದ್ದು, ಸತ್ಯವನ್ನು ಮರೆಮಾಚುವ ಕೆಲಸ ಮಾಡಲು ಮುಂದಾಗಿದೆ ಎಂದರು.

ಲೇಖಕ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಸತ್ಯ ಮಾತನಾಡುವ ಪತ್ರಕರ್ತರು, ಸಾಹಿತಿಗಳು, ಕವಿಗಳು, ಚಿಂತಕರು, ನಟರ ಪ್ರಶ್ನಿಸುವ ಧ್ವನಿಯನ್ನು ಅಡಗಿಸುವ ಹುನ್ನಾರ ಸಂಘಪರಿವಾರ ಮಾಡುತ್ತಿದೆ. ವಿಚಾರವಾದಿಗಳನ್ನು ಹತ್ಯೆ ಮಾಡುವ ಮೂಲಕ ಸತ್ಯವನ್ನು ಮುಚ್ಚಿಡಲು ಮುಂದಾಗುತ್ತಿದ್ದಾರೆ. ಹೀಗಾಗಿ, ಯುವ ಸಮುದಾಯ ಜಾಗೃತಗೊಳ್ಳಬೇಕು. ಇದರ ವಿರುದ್ಧ ಸಂಘಟಿತವಾದ ಚಳವಳಿ ರೂಪಿಸಬೇಕು ಎಂದು ತಿಳಿಸಿದರು.

ಹಿರಿಯ ಪತ್ರಕರ್ತೆ ಡಾ. ವಿಜಯಾ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ದೇಶದ ಜನರು ನಂಬಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗಾಗಿ, ಜನ ನಿಮ್ಮನ್ನು ಪ್ರಶ್ನೆ ಕೇಳುತ್ತಾರೆ. ಅದೇ ರೀತಿಯಲ್ಲಿ ಪ್ರಕಾಶ್ ಕಲಬುರ್ಗಿ, ಗೌರಿ ಹತ್ಯೆಗೆ ಸಂಬಂಧಿಸಿದಂತೆ ನಿಮ್ಮ ಮೌನವನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ಕೊಡುವುದು ನಿಮ್ಮ ಜವಾಬ್ದಾರಿ ಎಂದರು.

ಪ್ರತಿಭಟನೆಯಲ್ಲಿ ಲೇಖಕ ಶ್ರೀಪಾಧ್ ಭಟ್, ಸಿಐಟಿಯು ಮುಖಂಡರಾದ ಕೆ.ಎನ್.ಉವೆುೀಶ್, ವಕೀಲ ಅನಂತ್‌ನಾಯ್ಕ, ಯುವಜನ ಮುಖಂಡರಾದ ರಾಜಶೇಖರ್‌ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಟ ಪ್ರಕಾಶ್ ರೈ ಯಾವುದೇ ತಪ್ಪು ಮಾಡಿಲ್ಲ. ಸಮಾಜದಲ್ಲಿ ಅನ್ಯಾಯ ಎಂದು ಕಂಡಿದ್ದನ್ನು ಅವರು ಪ್ರಶ್ನಿಸಿದ್ದಾರೆ. ಅದಕ್ಕೆ ಸಂಬಂಧಿಸಿದವರು ಸಾಧ್ಯವಾದರೆ ಉತ್ತರ ಕೊಡಬೇಕಿತ್ತು. ಅದನ್ನು ಹೊರತು ಪಡಿಸಿ ಅವರ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಹೇಡಿತನ.
-ಡಾ.ವಿಜಯಾ, ಹಿರಿಯ ಪತ್ರಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News