ಮಾಜಿ ಸಚಿವ ತಿಪ್ಪೇಸ್ವಾಮಿಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’

Update: 2017-10-04 12:18 GMT

ಬೆಂಗಳೂರು, ಅ.4: ಪರಿಶಿಷ್ಟ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ರಾಜ್ಯ ಸರಕಾರದ ವತಿಯಿಂದ ಪ್ರದಾನ ಮಾಡುವ ಪ್ರಸಕ್ತ ಸಾಲಿನ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಮಾಜಿ ಸಚಿವ ತಿಪ್ಪೇಸ್ವಾಮಿ(73)ಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ ಪ್ರೊ.ಸುಕನ್ಯಾ ಮಾರುತಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಸಮ್ಮುಖದಲ್ಲಿ ಅವರು ತಿಪ್ಪೇಸ್ವಾಮಿ ಹೆಸರನ್ನು ಪ್ರಕಟಿಸಿದರು.

ಪ್ರಶಸ್ತಿಗಾಗಿ 26 ಅರ್ಜಿಗಳು ಸಲ್ಲಿಕೆಯಾಗಿದ್ದವು, ಈ ಪೈಕಿ 2 ಅರ್ಜಿಗಳನ್ನು ವಯೋಮಿತಿಯ ಕಾರಣಕ್ಕಾಗಿ ಅನರ್ಹಗೊಳಿಸಲಾಯಿತು. ಇನ್ನುಳಿದಂತೆ 24 ಅರ್ಜಿಗಳು ಹಾಗೂ ಸ್ವಾಭಿಮಾನದ ಕಾರಣಕ್ಕಾಗಿ ಅರ್ಜಿ ಸಲ್ಲಿಸದೆ ಇದ್ದಂತಹ ಸಾಧಕರನ್ನು ಪರಿಗಣಿಸಿ ಸಮಿತಿಯು ಎರಡು ಸಭೆ ನಡೆಸಿ ಅಂತಿಮವಾಗಿ ತಿಪ್ಪೇಸ್ವಾಮಿಯನ್ನು ಆಯ್ಕೆ ಮಾಡಿದೆ ಎಂದು ಅವರು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾದ ತಿಪ್ಪೇಸ್ವಾಮಿ, ಎಚ್.ಡಿ. ದೇವೇಗೌಡರ ನೇತೃತ್ವದ ಸರಕಾರದಲ್ಲಿ ಅಬಕಾರಿ ಹಾಗೂ ಜೆ.ಎಚ್.ಪಟೇಲ್ ಸರಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ ಸಮಾಜದ ಗುರು ಪುಣ್ಯಾನಂದಪುರಿ ಸ್ವಾಮೀಜಿಯೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮಾಜದ ಎಲ್ಲರ ಸಹಕಾರ ಪಡೆದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ‘ಶ್ರೀ ವಾಲ್ಮೀಕಿ ಗುರುಪೀಠ’ ಸ್ಥಾಪಿಸಲು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಗುಂಪಿನಲ್ಲಿದ್ದ ನಾಯಕ, ವಾಲ್ಮೀಕಿ, ಬೇಡ ಹಾಗೂ ಇತರೆ ಪರ್ಯಾಯ ಪದ ಹೊಂದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡದ(ಎಸ್ಟಿ) ಜನಾಂಗಕ್ಕೆ ಸೇರಿಸಲು ಶ್ರಮಿಸಿದ್ದಾರೆ. 1999ರಲ್ಲಿ ಅಬಕಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಈ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯವನ್ನು ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಸುಕನ್ಯಾ ಮಾರುತಿ ತಿಳಿಸಿದರು.

ಚಳ್ಳಕೆರೆ ತಾಲೂಕಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲು ಶ್ರಮಿಸಿದ್ದಾರೆ. ಅಲ್ಲದೆ, ಪರಿಶಿಷ್ಟ ಪಂಗಡದವರೆ ಹೆಚ್ಚಾಗಿರುವ ಚಳ್ಳಕೆರೆ ತಾಲೂಕು ದೇವರಕುಂಟೆ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಪ್ರೌಢಶಾಲೆ ಹಾಗೂ ಕಾಟಪ್ಪನಹಟ್ಟಿಯಲ್ಲಿ ಶ್ರೀ ಕಾಟಮಲಿಂಗೇಶ್ವರ ಪ್ರೌಢಶಾಲೆಯನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದರು.

  ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಮಹರ್ಷಿ ವಾಲ್ಮೀಕಿ ಪ್ರಶಸ್ತಿಯು 5 ಲಕ್ಷ ರೂ.ನಗದು, ಪದಕ, ಪಾರಿತೋಷಕವನ್ನು ಒಳಗೊಂಡಿರುತ್ತದೆ. ಈ ಬಾರಿಯ ವಾಲ್ಮೀಕಿ ಜಯಂತಿಯನ್ನು ವೈಶಿಷ್ಟವಾಗಿ ಆಚರಿಸಲಾಗುವುದು. ಶಾಸಕರ ಭವನದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಹಾಗೂ ವಾಲ್ಮೀಕಿ ತಪೋವನವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಆಯೋಗವು ಶೀಘ್ರವೇ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ(ಜಾತಿಗಣತಿ)ಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ. ಆನಂತರ, ಅದರ ವಿವರಗಳನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೆ, ಅಂತರ್ಜಾಲ ತಾಣದಲ್ಲಿಯೂ ಸಮೀಕ್ಷೆಯ ವರದಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಆಯುಧ ಪೂಜೆಗೆ ಸಂಬಂಧಿಸಿದಂತೆ ನಾನು ನೀಡಿದ್ದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನನ್ನ ರಾಜೀನಾಮೆ ಕೇಳಿದ್ದಾರೆ. ತಮ್ಮ ತಮ್ಮ ಧರ್ಮ, ನಂಬಿಕೆಗಳಿಗೆ ಅನುಸಾರವಾಗಿ ಪೂಜೆ, ಪುನಸ್ಕಾರಗಳನ್ನು ಮಾಡಿಕೊಳ್ಳಬಹುದು. ಈವರೆಗೆ ನಾವು ಮತ್ತೊಬ್ಬರ ನಂಬಿಕೆಯನ್ನು ಪ್ರಶ್ನಿಸಲು ಹೋಗಿಲ್ಲ ಎಂದು ಅವರು ಆಂಜನೇಯ ತಿಳಿಸಿದರು.

ನಮ್ಮದು ಸರ್ವಧರ್ಮೀಯರ ದೇಶ, ಇಲ್ಲಿ ಎಲ್ಲ ಧರ್ಮದವರಿಗೂ ಅವರಿಗೆ ಬೇಕಾದ ಆಚರಣೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರವಿದೆ. ವಿಧಾನಸೌಧವು ಸರ್ವಧರ್ಮೀ ಯರಿಗೆ ಸೇರಿದ್ದು, ಇಲ್ಲಿ ಎಲ್ಲ ವರ್ಗಗಳ ಕೆಲಸಗಳು ನಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News