ಆಟಗಾರರ ವಯಸ್ಸು ಖಚಿತಪಡಿಸಲು ಎಂಆರ್‌ಐ ಸ್ಕ್ಯಾನಿಂಗ್

Update: 2017-10-04 18:43 GMT

ಹೊಸದಿಲ್ಲಿ, ಅ.4: ಹಾಲಿ ಚಾಂಪಿಯನ್ ನೈಜೀರಿಯ ತಂಡ ವಯಸ್ಸು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಶುಕ್ರವಾರ ಭಾರತದಲ್ಲಿ ಆರಂಭವಾಗಲಿರುವ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಆಟಗಾರರ ವಯಸ್ಸಿನ ಮೇಲೆ ಕಣ್ಣಿಡಲು ನಿರ್ಧರಿಸಲಾಗಿದೆ.

 ನೇಮರ್, ರೊನಾಲ್ಡಿನೊ, ಆ್ಯಂಡ್ರೆ ಇನೆಸ್ತಾ ಹಾಗೂ ಕ್ಸೇವಿ ಹೆರ್ನಾಂಡಿಝ್ ವೃತ್ತಿಬದುಕನ್ನು ರೂಪಿಸಿರುವ ಕಿರಿಯರ ಫುಟ್ಬಾಲ್ ವಿಶ್ವಕಪ್‌ನಲ್ಲಿ ಆಟಗಾರರ ವಯಸ್ಸನ್ನು ಖಚಿತಪಡಿಸಲು ಫಿಫಾ ಎಲ್ಲ ಕ್ರಮಕೈಗೊಂಡಿದೆ. ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಆಟಗಾರರ ಜ.1,2000ಕ್ಕಿಂತ ಮೊದಲು ಜನಿಸಿದ್ದಾರೆಯೇ ಎನ್ನುವುದನ್ನು ಎಂಆರ್‌ಐ ಸ್ಕಾನಿಂಗ್ ಮಾಡುವ ಮೂಲಕ ಪರೀಕ್ಷಿಸಲಾಗುತ್ತದೆ.

 ಐದು ಬಾರಿ ಅಂಡರ್-17 ವಿಶ್ವಕಪ್‌ನ್ನು ಜಯಿಸಿ ದಾಖಲೆ ನಿರ್ಮಿಸಿರುವ ನೈಜೀರಿಯ ಆಟಗಾರರು ಆಗಸ್ಟ್ ನಲ್ಲಿ ನಡೆದ ಪ್ರಮುಖ ಫುಟ್ಬಾಲ್ ಟೂರ್ನಿಯ ಮೊದಲು ನಡೆಸಲಾದ ವಯಸ್ಸು ಪರೀಕ್ಷೆಯ ವೇಳೆ ತಂಡದ 26 ಆಟಗಾರರು ಸಿಕ್ಕಿಬಿದ್ದಿದ್ದರು. ಕಾನ್ಫಡರೇಶನ್ ಆಫ್ ಆಫ್ರಿಕ ಫುಟ್ಬಾಲ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ನೈಜೀರಿಯ ಈವರ್ಷದ ಅಂಡರ್-17 ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿದೆ. 2013 ಹಾಗೂ 2015ರ ವಿಶ್ವಕಪ್‌ನ್ನು ಜಯಿಸಿದ್ದ ನೈಜೀರಿಯದ ಹ್ಯಾಟ್ರಿಕ್ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಇತರ ದೇಶಗಳಲ್ಲಿ ವಯಸ್ಸು ವಂಚನೆ ಪ್ರಕರಣದ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಫಿಫಾ ಅಧಿಕಾರಿಗಳು 17ನೆ ಆವೃತ್ತಿಯ ಫುಟ್ಬಾಲ್ ಟೂರ್ನಮೆಂಟ್‌ಗೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮ್ಯಾಜಿಂಗ್ ಸಾಧನವನ್ನು ತರಲಿದೆ. ಈ ಸಾಧನವನ್ನು ವಿಶ್ವಕಪ್ ಪಂದ್ಯಗಳು ನಡೆಯುವ ಭಾರತದ ಎಲ್ಲ ಆರು ನಗರಗಳಲ್ಲಿ ಇಡಲಾಗುತ್ತದೆ. ಎಂಆರ್‌ಐ ಸ್ಕಾನಿಂಗ್‌ನಲ್ಲಿ ಆಟಗಾರ 17 ವರ್ಷದೊಳಗಿನವರು ಎನ್ನುವುದು 99 ಶೇ.ನಿಖರವಾಗಿ ತಿಳಿದುಬರುತ್ತದೆ. ಆತ ಅಥವಾ ಆಕೆಯ ದೇಹದ ಬೆಳವಣಿಗೆ ನಿಂತಿದೆಯೇ ಎನ್ನುವುದು ಸ್ಕಾನಿಂಗ್ ಪತ್ತೆ ಹಚ್ಚಲಿದೆ. ಸಾಮಾನ್ಯವಾಗಿ 17 ವರ್ಷದ ಬಳಿಕ ವ್ಯಕ್ತಿಯ ಬೆಳವಣಿಗೆ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

 ‘‘ಆಟಗಾರರು ಸರಿಯಾದ ವಯಸ್ಸಿನವರು ಎಂದು ದೃಢಪಡಿಸಿಕೊಳ್ಳುವುದು ಪ್ರತಿಯೊಂದು ಫುಟ್ಬಾಲ್ ಸಂಸ್ಥೆಯ ಸದಸ್ಯರುಗಳ ಜವಾಬ್ದಾರಿಯಾಗಿದೆ. ಅಂಡರ್-17 ವಿಶ್ವಕಪ್‌ನಲ್ಲಿ ಎಲ್ಲ ಆಟಗಾರರ ವಯಸ್ಸು ಖಚಿತಪಡಿಸಲು ಎಂಆರ್‌ಐ ಸ್ಕಾನಿಂಗ್ ಮಾಡಲು ನಿರ್ಧರಿಸಿದೆ’’ ಎಂದು ಫಿಫಾ ವಕ್ತಾರರು ತಿಳಿಸಿದ್ದಾರೆ. ವಿಶ್ವಕಪ್ ಟೂರ್ನಿಯು ಶುಕ್ರವಾರದಂದು ಹೊಸದಿಲ್ಲಿಯಲ್ಲಿ ಆರಂಭವಾಗಲಿದ್ದು, ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಎರಡು ಬಾರಿಯ ಚಾಂಪಿಯನ್ ಘಾನ ತಂಡ ಕೊಲಂಬಿಯಾವನ್ನು ಹಾಗೂ ಆತಿಥೇಯ ಭಾರತ ತಂಡ ಅಮೆರಿಕವನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಟರ್ಕಿಯನ್ನು ಹಾಗೂ ಪರಾಗ್ವೆ ತಂಡ ಮಾಲಿಯನ್ನು ಮುಖಾಮುಖಿಯಾಗಲಿದೆ.

ಚಾಂಪಿಯನ್ ನೈಜೀರಿಯ ತಂಡದ ಅನುಪಸ್ಥಿತಿ ಹಾಗೂ ಮೂರು ಬಾರಿಯ ಚಾಂಪಿಯನ್ ಬ್ರೆಝಿಲ್ ದುರ್ಬಲಗೊಂಡಿರುವ ಕಾರಣ ಈ ಬಾರಿಯ ವಿಶ್ವಕಪ್ ಮುಕ್ತವಾಗಿದ್ದು, ಯಾರು ವಿಜೇತರು ಎಂದು ಹೇಳಲಾಗದು.

‘‘ಸ್ಪೇನ್, ಇಂಗ್ಲೆಂಡ್, ಮೆಕ್ಸಿಕೊ ಹಾಗೂ ಅಮೆರಿಕ ಸೇರಿದಂತೆ ಯುರೋಪ್‌ನ ಎಲ್ಲ ತಂಡಗಳು ತುಂಬಾ ಬಲಿಷ್ಠವಾಗಿವೆ. ದಕ್ಷಿಣ ಅಮೆರಿಕ ದೇಶಗಳು ಪ್ರಶಸ್ತಿಯ ರೇಸ್‌ನಲ್ಲಿವೆ. 17 ವರ್ಷದೊಳಗಿನವರ ಫುಟ್ಬಾಲ್ ಟೂರ್ನಿಯಲ್ಲಿ ಆಫ್ರಿಕ ತಂಡವನ್ನು ಎದುರಿಸುವುದು ಯಾವಾಗಲೂ ಕಷ್ಟಕರವಾಗಿರುತ್ತದೆ’’ ಎಂದು ಬ್ರೆಝಿಲ್ ಕೋಚ್ ಕಾರ್ಲೊಸ್ ಅಮಡೆವು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ಸ್ಟ್ರೈಕರ್ ವಿನಿಸಿಯಸ್ ಜೂನಿಯರ್ ಅನುಪಸ್ಥಿತಿಯಲ್ಲಿ ಬ್ರೆಝಿಲ್ ತಂಡ ತೀವ್ರ ಹಿನ್ನಡೆ ಅನುಭವಿಸಿದೆ. ವಿನಿಸಿಯಸ್‌ರನ್ನು ಫ್ಲೆಮೆಂಗೊ ಕ್ಲಬ್ ವಿಶ್ವಕಪ್ ಆಡಲು ಅವಕಾಶ ನೀಡಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News