ಕಾಲದ ಮಹಿಮೆ!

Update: 2017-10-06 18:42 GMT

ಮಾನ್ಯರೆ,

ಮೊನ್ನೆ ಗಾಂಧಿ ಜಯಂತಿಯಂದು ಮಂಗಳೂರಿನ ಪುರಭವನದ ಎದುರಿಗಿರುವ ಗಾಂಧಿ ಪ್ರತಿಮೆಯ ಮುಂದೆ ಹಮ್ಮಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆಯ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಪ್ರಗತಿಪರ ಚಿಂತಕ ಶಿವಸುಂದರ್ ಹಾಗೂ ಪತ್ರಕರ್ತ ಹರ್ಷಕುಮಾರ್ ಕುಗ್ವೆ ಇವರಿಬ್ಬರೂ ಹೇಳಿದಂತೆ 2014ರ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷ ಗೆದ್ದಿದ್ದು ಕೇವಲ ಸಾಮಾಜಿಕ ಮೀಡಿಯಾವನ್ನು ಸಮರ್ಥವಾಗಿ ‘ದುಡಿಸಿ’ಕೊಂಡಿದ್ದರಿಂದ ಮಾತ್ರವಲ್ಲ, ಸಮರ್ಥವಾಗಿ ದುರ್ಬಳಕೆ ಮಾಡಿಕೊಂಡಿದ್ದರಿಂದ ಕೂಡಾ!

 
ಹಿಂದಿನ ಐದು ವರ್ಷಗಳಿಂದಲೂ ಬಿಜೆಪಿ ಐಟಿ ಸೆಲ್‌ನಿಂದ ಸಾಮಾಜಿಕ ಮೀಡಿಯಾಗಳ ಘೋರ ದುರ್ಬಳಕೆ ಆಗುತ್ತಿದೆ. 2014ರ ಲೋಕಸಭಾ ಚುನಾವಣೆಯ ವೇಳೆ ಸಾಮಾಜಿಕ ಮೀಡಿಯದ ದುರ್ಬಳಕೆ ಪರಾಕಾಷ್ಠೆಗೆ ಮುಟ್ಟಿದ್ದು ಮಾತ್ರವಲ್ಲ, ಆ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶ ಪೂರ್ತಿಯಾದ ಮೇಲೂ ಅದರ ದುರ್ಬಳಕೆ ನಿಲ್ಲುವ ಬದಲು ಅದು ಮಿತಿಮೀರಿ ಹೋಗಿದೆ. ಹಿಂದಿನ ಮೂರೂವರೆ ವರ್ಷದಲ್ಲಿ ಕೋಮು ಪ್ರಚೋದಕ ಸುದ್ದಿಗಳನ್ನು ಮತ್ತು ವದಂತಿಗಳನ್ನು ಹಬ್ಬಿಸಲು ಸಾಮಾಜಿಕ ಮೀಡಿಯಾ ಅತಿ ಹೆಚ್ಚು ದುರ್ಬಳಕೆ ಆಗಿದೆ. ಯಾಕೆಂದರೆ ಬಿಜೆಪಿ ಐಟಿ ಸೆಲ್ ಈಗ ಸಭ್ಯ ಪತ್ರಕರ್ತರ ಕೈಯಿಂದ ಜಾರಿ ಅರೆಸಾಕ್ಷರ ಪುಂಡ ಪೋಕರಿಗಳ ಮುಷ್ಟಿಯಲ್ಲಿ ಸಿಕ್ಕಿಬಿದ್ದಿದೆ. ಆದರೆ ಹರ್ಷಕುಮಾರ್ ಹೇಳಿದಂತೆ, ಈಗ ಕಾಲಚಕ್ರ ಒಂದು ಪೂರ್ಣ ಸುತ್ತು ತಿರುಗಿದೆ. ಹಾಗಾಗಿ ಇತ್ತೀಚೆಗೆ ಪ್ರಜ್ಞಾವಂತ ಕ್ರಿಯಾಶೀಲ ಗುಂಪುಗಳು ಹಾಗೂ ಇತರ ರಾಜಕೀಯ ಪಕ್ಷಗಳು ಸಹ ತಮ್ಮ ತಮ್ಮ ಸಾಮಾಜಿಕ ಮೀಡಿಯಾ ಅರ್ಥಾತ್ ಐಟಿ ಸೆಲ್‌ಗಳನ್ನು ಸ್ಥಾಪಿಸಿಕೊಂಡು ಬಿಜೆಪಿ ಐಟಿ ಸೆಲ್‌ನವರ ಕೊಳಕು ಆಟಗಳಿಗೆ ಅವರದೇ ಭಾಷೆಯಲ್ಲಿ ತಿರುಗೇಟು ಕೊಡುತ್ತಿದ್ದಾರೆ. ಸಂಘಪರಿವಾರಿಗರ ಕಹಿ ಮದ್ದು ಈಗ ಅವರ ಬಾಯಿಗೇ ಮರಳಿ ತುರುಕಲಾಗುತ್ತಿದೆ. ಗೌರಿ ಲಂಕೇಶರ ಮರಣಕ್ಕೆ ಸಂಭ್ರಮಿಸಿದ್ದ ಅಮಾನವೀಯ ಬುದ್ದಿಯ ನೀರಜ್ ದವೆ ಮತ್ತು ನಿಖಿಲ್ ದಧಿಚ್ ಎಂಬ ಗುಜರಾತಿನ ಎರಡು ವಿಕೃತ ಮನಸ್ಸಿನ ಪೇಡ್ ಟ್ರೋಲ್‌ಗಳ ಮೇಲೆ ಸೈಬರ್ ಕ್ರೈಂ ಕೇಸ್ ದಾಖಲಾಗಿದೆ, ಹಾಗಾಗಿ ಇವರನ್ನು ಫಾಲೋ ಮಾಡುತ್ತಿದ್ದ ಸ್ವತಃ ಪ್ರಧಾನಿ ಮೋದಿಯವರ ಮೇಲೂ ಈ ಸೈಬರ್ ಕ್ರೈಂ ಕೇಸಿನ ಕರಿನೆರಳು ಬೀಳುವ ಸಾಧ್ಯ ಇದೆ ಎಂದು ಚಿಂತಕರು ಹೇಳುತ್ತಾರೆ. ನಾನು ಬೆಟ್ಟಕ್ಕಿಂತಲೂ ಎತ್ತರ ಎಂದು ಅಹಂಕಾರ ತೋರಿಸುತ್ತಿದ್ದ ಒಂಟೆ ಕೊನೆಗೂ ಬೆಟ್ಟದ ಅಡಿಗೆ ಬರಲೇ ಬೇಕಾದೀತೇ?. 

Writer - -ಆರ್.ಬಿ.ಶೇಣವ, ಮಂಗಳೂರು

contributor

Editor - -ಆರ್.ಬಿ.ಶೇಣವ, ಮಂಗಳೂರು

contributor

Similar News