×
Ad

ದುಷ್ಕರ್ಮಿಗಳಿಂದ ವ್ಯಕ್ತಿಯ ಹತ್ಯೆ

Update: 2017-10-07 18:57 IST

ಬೆಂಗಳೂರು, ಅ.7: ದುಷ್ಕರ್ಮಿಗಳ ಗುಂಪೊಂದು ದೇಶದ ಈಶಾನ್ಯ ಭಾಗದ ಮೇಘಾಲಯ ಮೂಲದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಮೇಘಾಲಯದ ಶಿಲ್ಲಾಂಗ್ ಮೂಲದ ಸಂಜಯ್ ತಮಂಗ್(35) ಹತ್ಯೆಯಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಬಾಣಸವಾಡಿಯ ಕಾಚರಕನಹಳ್ಳಿಯ ನೆಹರು ರಸ್ತೆಯಲ್ಲಿರುವ ಡಿಲಿಯಸ್ ಮೆಮೋಸ್ ಎಂಬ ಹೊಟೇಲ್‌ನಲ್ಲಿ ಸಂಜಯ್ ತಮಂಗ್ ಕೆಲಸ ಮಾಡುತ್ತಿದ್ದು, ಈತನೊಂದಿಗೆ ಈಶಾನ್ಯ ಭಾರತದ ಇತರ 12 ಮಂದಿಯೂ ಕಾರ್ಯನಿರ್ವಹಿಸುತ್ತಿದ್ದರು. ಕಮ್ಮನಹಳ್ಳಿ ಚರ್ಚ್ ಪಕ್ಕ ವಾಸವಾಗಿರಲು ಇವರಿಗೆ ಮಾಲಕರು ವ್ಯವಸ್ಥೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಸ್ಕೂಟರ್‌ನಲ್ಲಿ ಬಂದ ಮೂವರು ಅಪರಿಚಿತರು ಸಂಜಯ್ ತಮಂಗ್ ಚಾಕುನಿಂದ ಇರಿದು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದರು. ರಕ್ತಸ್ರಾವದಿಂದ ನರಳುತ್ತಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಳೇ ದ್ವೇಷದ ಕಾರಣ ಈ ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಈ ಸಂಬಂಧ ಬಾಣಸವಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News