ಅ.13 ರಿಂದ ವಿಶೇಷ ಕಲೋತ್ಸವ
Update: 2017-10-07 19:14 IST
ಬೆಂಗಳೂರು, ಅ.7: ಕಲಾಸಂದೇಶ ಪ್ರತಿಷ್ಠಾನ ವತಿಯಿಂದ ಉತ್ತುಂಗ ಕಲೆ ಮತ್ತು ಕಲಾವಿದರಿಗಾಗಿ ವಿಶೇಷ ಕಲೋತ್ಸವ ಎಂಬ ಕಾರ್ಯಕ್ರಮವನ್ನು ಅ.13 ರಿಂದ 15ರವರೆಗೆ ಮೂರು ದಿನಗಳ ಕಾಲ ಮೈಸೂರಿನ ಜಗನ್ಮೋಹನ ಪ್ಯಾಲೆಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ರಾಧಿಕಾ ಎಸ್ ಭಾರ್ಗವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಭರತನಾಟ್ಯ ವಿದ್ವಾಂಸ ಡಾ.ತುಳಸಿ ರಾಮಚಂದ್ರ, ಕಲಾ ಪೋಷಕ ಟಿ.ಆರ್.ಹರೀಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆಯಲ್ಲಿ ವಿದುಷಿ ರಾಧಾ ಶ್ರೀಧರ್‌ಗೆ ನಾಟ್ಯ ಕಲೋತ್ತುಂಗ ಪ್ರಶಸ್ತಿ ಹಾಗೂ ಡಾ.ಎಲ್.ಸುಬ್ರಮಣ್ಯಂಗೆ ಸಂಗೀತ ಕಲೋತ್ತುಂಗ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.